ಬೆಂಗಳೂರು: ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ ಹೆಣ್ಣುಮಕ್ಕಳ ಬಗ್ಗೆ ಮಾತಾಡುವಾಗ ಸರಿಯಾಗಿ ಮಾತಾಡಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಮುಖಂಡೆ ಮಾಳವಿಕ ಅವಿನಾಶ್ ಕಿಡಿಕಾರಿದ್ದಾರೆ.
ಜಮೀರ್ ಅವರು ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿತ್ತು. ಹೀಗಾಗಿ ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಜಮೀರ್ ಅಹ್ಮದ್ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್
ಇದೀಗ ಈ ಕುರಿತಂತೆ ಮಾಳವಿಕಾ ಅವಿನಾಶ್ ಅವರು, ಜಮೀರ್ ಅವರು ಕ್ಷಮೆ ಕೇಳುವುದರಿಂದ ಅವರ ಮಾನಸಿಕತೆ ಬದಲಾಗಲ್ಲ. ಮೊದಲು ಜಮೀರ್ ತಮ್ಮ ಮಾನಸಿಕತೆ ಬದಲಾಯಿಸಿಕೊಳ್ಳಲಿ. ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ. ಹೆಣ್ಣುಮಕ್ಕಳ ಬಗ್ಗೆ ಮಾತಾಡುವಾಗ ಸರಿಯಾಗಿ ಮಾತಾಡಬೇಕು. ಕಾಂಗ್ರೆಸ್ ಶಾಬಾನು ಪ್ರಕರಣದ ಮಾನಸಿಕತೆಯಿಂದ ಮೊದಲು ಅವರು ಆಚೆ ಬರಲಿ. ಜಮೀರ್ ತಮ್ಮ ಮನಸಿಗೆ ಹಿಜಬ್ ಹಾಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಖನೀಜ್ ಫಾತಿಮಾ ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಹಿಜಬ್ ಧರಿಸದಂತೆ ಅವರನ್ನು ಯಾರೂ ತಡೆದಿಲ್ಲ. ಶಾಸಕಿ ಖನೀಜ್ ಫಾತಿಮಾ ಅವರು ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಹಿಜಬ್‍ಗೆ ನಿಷೇಧ ಇಲ್ಲ. ಜನರಿಗೆ ತಪ್ಪು ಮಾಹಿತಿ ಕೊಡಬಾರದು. ಪ್ರಶ್ನೆ ಇರುವುದು ಶಾಲೆಗಳಲ್ಲಿ ಯೂನಿಫಾರ್ಮ್ ಇರಬೇಕು ಎನ್ನುವುದು. ಒಂದೇ ಯೂನಿಫಾರ್ಮ್ ಇರಲಿ ಅನ್ನುವುದಷ್ಟೇ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್