ಅವಧಿ ಮೀರಿ ವಾಸಗೃಹದಿಂದ ಕುಟುಂಬ ಹೊರಹಾಕಿದ್ದ ಪ್ರಕರಣ ಸುಖಾಂತ್ಯ – ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ

Public TV
2 Min Read
Malai Mahadeshwara Swamy Contractor

ಚಾಮರಾಜನಗರ: ಅವಧಿ ಮೀರಿ ವಾಸವಿದ್ದ ಕಾರಣಕ್ಕೆ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವಸತಿಗೃಹದಿಂದ ಕುಟುಂಬವೊಂದನ್ನು ಹೊರಹಾಕಲ್ಪಟ್ಟಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ ಕೊಡಲು ತೀರ್ಮಾನಿಸಲಾಗಿದೆ.

ಕಳೆದ ಎಂಟು ದಿನಗಳಿಂದ ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ತಾತ್ಕಾಲಿಕ ವಸತಿ ಗೃಹ ಸೌಲಭ್ಯ ನೀಡಲು ಹಾಗೂ ಮೃತ ನೌಕರನ ಪುತ್ರ ಶಾಂತಮಲ್ಲೇಶ್ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲು ತೀರ್ಮಾನಿಸಲಾಗಿದೆ. ಪ್ರಾಧಿಕಾರದ ನೌಕರ ಜಯಸ್ವಾಮಿ 2019 ರಲ್ಲಿ ಮೃತಪಟ್ಟಿದ್ದರು. ಆದರೆ ಅವರ ಕುಟುಂಬದವರು ಪ್ರಾಧಿಕಾರದ ವಸತಿಗೃಹದಲ್ಲೇ ವಾಸ ಮುಂದುವರಿಸಿದ್ದರು. ಇದನ್ನೂ ಓದಿ:  ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

Malai Mahadeshwara Swamy Contractor 2

ಜಯಸ್ವಾಮಿ ಅವರ ಮರಣಾನಂತರ ನೀಡಬೇಕಿದ್ದ ಬಾಕಿ ಇರುವ ಗ್ರಾಚ್ಯುಯಿಟಿ, ಪಿಎಫ್ ಹಣ ನೀಡಬೇಕು. ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ನಿಯಮಾನುಸಾರ ವಸತಿ ಗೃಹ ಖಾಲಿ ಮಾಡಬೇಕು. ನಂತರವಷ್ಟೇ ಇತ್ಯರ್ಥಪಡಿಸುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರು. ಅಲ್ಲದೆ ವಸತಿಗೃಹ ಖಾಲಿ ಮಾಡುವಂತೆ ನೋಟೀಸ್ ಸಹ ನೀಡಿದ್ದರು.

ನೋಟೀಸ್‍ಗೆ ಸ್ಪಂದಿಸದ ಕಾರಣ ಜ.14 ರಂದು ವಸತಿಗೃಹ ಖಾಲಿ ಮಾಡಿಸಿ ಬೀಗಮುದ್ರೆ ಹಾಕಲಾಗಿತ್ತು. ಇದಾದ ಬಳಿಕ ನಿರಾಶ್ರಿತರದ ಮೃತ ನೌಕರನ ಕುಟುಂಬದವರು ಪಾತ್ರೆಪಗಡಗಳೊಂದಿಗೆ ಬೀದಿಯಲ್ಲೇ ಕಾಲಕಳೆದಿದ್ದರು. ಈ ಸಂಬಂಧ ಪ್ರಾಧಿಕಾರದ ಅಧಿಕಾರಿಗಳು ಸಂತ್ರಸ್ತ ಕುಟುಂಬದವರು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವೀರಶೈವ ಲಿಂಗಾಯತ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದರು.

ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಹಿಂದೆ ದಿವಂಗತ ಜಯಸ್ವಾಮಿ ಅವರ ಮಗ ಶಾಂತಮಲ್ಲೇಶ್ ಹೊರಗುತ್ತಿಗೆಯಲ್ಲಿ ಸುಮಾರು 3-4 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಾಗೂ ಕೆಲಸದ ಒತ್ತಡ ಇಲ್ಲದ್ದರಿಂದ ಕಳೆದ ಒಂದು ವರ್ಷದಲ್ಲಿ ಕೆಲವರನ್ನು ಕೆಲಸದಿಂದ ಕೈಬಿಡಲಾಗಿತ್ತು. ಅದರಲ್ಲಿ ಇವರೂ ಒಬ್ಬರಾಗಿದ್ದು, ಇದೀಗ ಅವರಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

Malai Mahadeshwara Swamy Contractor 1

ಪಿಎಫ್ ಮೊತ್ತವನ್ನು ಪಡೆಯಲು ಬೇಕಾದ ದಾಖಲೆಗಳನ್ನು ಕುಟುಂಬಕ್ಕೆ ಕೋರಿದರೂ ಈವರೆಗೆ ಸಲ್ಲಿಸಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಸಂಬಂಧಿತ ಸಂಸ್ಥೆಯಿಂದ ಆದಷ್ಟು ಬೇಗ ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾತ್ಕಾಲಿಕ ನೆಲೆಗಟ್ಟಿನಲ್ಲಿ ಈ ಹಿಂದೆ ತಾತ್ಕಾಲಿಕ ವಸತಿ ಗೃಹವನ್ನು ದಿ.ಜಯಸ್ವಾಮಿ ಅವರ ಮಗನಿಗೆ ನೀಡಲಾಗಿತ್ತು. ಅದನ್ನು ತಿರಸ್ಕರಿಸಿದ್ದರು. ಈಗ ಮತ್ತೆ ತಾತ್ಕಾಲಿಕ ನೆಲೆಗಟ್ಟಿನಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸಲ್ಮಾನ್ ಫಾರ್ಮ್‍ಹೌಸ್‍ನಲ್ಲಿ ಸೆಲೆಬ್ರಿಟಿಗಳ ಶವ, ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತೆ ಎಂದ ನೆರೆಮನೆಯವ!

vlcsnap 2022 01 23 19h12m44s926

ಸಂತ್ರಸ್ತ ಕುಟುಂಬಸ್ಥರು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ವಸ್ತುಗಳನ್ನು ಸ್ಥಳಾಂತರಿಸಿ ಪ್ರಾಧಿಕಾರದ ತಾತ್ಕಾಲಿಕ ವಸತಿ ಗೃಹಕ್ಕೆ ಇಂದು ತೆರಳಿದ್ದಾರೆ. ಈಗಾಗಲೇ ಗ್ರಾಚುಯಿಟಿ ಹಣದಲ್ಲಿ ರೂ.3.11 ಲಕ್ಷ ಪಾವತಿಸಲಾಗಿದೆ. ಉಳಿಕೆ ಹಣ ರೂ. 1.35 ಲಕ್ಷದಲ್ಲಿ ಬಾಡಿಗೆ ಹಣ ತೆಗೆದುಕೊಂಡು ಉಳಿದ ಹಣವನ್ನು ಪಾವತಿಸಲು ಕೊರಿದ್ದು, ಕೂಡಲೇ ಕ್ರಮವಹಿಸಲಾಗುವುದು ಎಂದರು.

ಈ ಪ್ರಕರಣದಲ್ಲಿ ಪ್ರಾಧಿಕಾರವು ನಿಯಮಾನುಸಾರ ಕ್ರಮ ಕೈಗೊಂಡಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಕ್ರಮವಾಗಿ ವಾಸವಿರುವವರನ್ನು ಖಾಲಿ ಮಾಡುವ ವಿಚಾರದಲ್ಲಿ ಪ್ರಾಧಿಕಾರದ ಗಮನಕ್ಕೆ ತರಲಾಗುವುದು. ನೌಕರರ ಸಂಘದವರೊಡನೆ ಸಹಾ ಚರ್ಚಿಸಿ ಇತ್ಯರ್ಥ ಪಡಿಸಲಾಗುವುದು ಹಾಗೂ ಖಾಯಂ ವಸತಿ ಗೃಹಗಳನ್ನು ಖಾಯಂ ನೌಕರರಿಗೆ ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *