ಮಂಗಳೂರು ಕಡೆ ಹೋದ್ರೆ ಅಂತೂ ಈ ತಿಂಡಿ ಸ್ಪೆಷಲ್. ಇಲ್ಲಿ ಬೆಳಗ್ಗೆ ಬ್ರೇಕ್ ಫಾಸ್ಟ್ ಗೂ ಇದನ್ನೇ ತಿಂತಾರೆ ಸಂಜೆ ತಿಂಡಿಗೂ ಇದನ್ನೇ ಮಾಡ್ತಾರೆ. ಹೌದು, ಇದೇ ನಮ್ಮ ರುಚಿ ರುಚಿಯಾದ ಮಂಗಳೂರು ಬನ್ಸ್. ಪೂರಿ ಹೋಲಿಕೆಯ ಬನ್ಸ್ ಗೆ ಚಟ್ನಿ ಅಂತೂ ಸೂಪರ್ ಕಾಂಬಿನೇಷನ್. ಈ ಮಂಗಳೂರು ಬನ್ಸ್ ಸುಲಭವಾಗಿ ಮನೆಯಲ್ಲೇ ತಯಾರಿಸುವುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಾದ್ರೆ ತಡ ಮಾಡದೆ ನೀವು ಸಹ ಮನೆಯಲ್ಲೇ ಮಂಗಳೂರು ಶೈಲಿಯ ಬನ್ಸ್ ತಯಾರಿಸಿ.
ಬೇಕಾಗುವ ಸಾಮಗ್ರಿಗಳು:
ಬಲಿತ ಬಾಳೆಹಣ್ಣು-2-3
ಮೈದಾ ಹಿಟ್ಟು – 2 ಕಪ್
ಸಕ್ಕರೆ-3 ಟೇಬಲ್ ಚಮಚ
ಜೀರಿಗೆ-1 ಟೀ ಚಮಚ
ಮೊಸರು- 1/4 ಕಪ್
ಬೇಕಿಂಗ್ ಸೋಡಾ- ಚಿಟಿಕೆಯಷ್ಟು
ಉಪ್ಪು-1/2 ಟೀ ಚಮಚ
ಅಡುಗೆ ಎಣ್ಣೆ- ಕರಿಯಲು ಬೇಕಾಗುವಷ್ಟು
ಮಾಡುವ ವಿಧಾನ:
*ಸಿಪ್ಪೆ ತೆಗೆದ ಬಾಳೆಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ಚಮಚ ಅಥವಾ ಕೈಯಿಂದ ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ.
* ಇದಕ್ಕೆ 2 ಟೇಬಲ್ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಬಳಿಕ ಜೀರಿಗೆ ಮತ್ತು ಉಪ್ಪು ಸೇರಿಸಿ. ಇದೇ ಮಿಶ್ರಣಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈ ಮಿಶ್ರಣಕ್ಕೆ ಮೈದಾ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಹಿಟ್ಟು ಮೃದುವಾಗಲು 5 ನಿಮಿಷ ನಾದಿಕೊಳ್ಳಿ. ಬಳಿಕ ಇದನ್ನು ದೊಡ್ಡ ಉಂಡೆಯನ್ನಾಗಿ ಮಾಡಿ ಅದಕ್ಕೆ ಎಣ್ಣೆ ಹಚ್ಚಿ.
* ಒಂದು ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ಹಿಂಡಿಕೊಳ್ಳಿ. ಬಟ್ಟೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿಕೊಳ್ಳಿ. ಒದ್ದೆ ಬಟ್ಟೆಯನ್ನು ಹಿಟ್ಟಿನ ಮೇಲೆ ಮುಚ್ಚಿದ ಬಳಿಕ ಅದನ್ನು ಬೆಚ್ಚಗಿನ ಸ್ಥಳದಲ್ಲಿ 8 ಗಂಟೆಗಳ ಕಾಲ ಇಡಿ.
* 8 ಗಂಟೆಗಳಾದ ಬಳಿಕ ಈ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
* ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೈದಾವನ್ನು ಮೇಲೆ ಹಾಕಿ ಪೂರಿಗಿಂತ ಸ್ವಲ್ಪ ದಪ್ಪವಿರುವಂತೆ ಲಟ್ಟಿಸಿಕೊಳ್ಳಿ.
* ಬಳಿಕ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
* ಬನ್ಸ್ ನ ಎರಡೂ ಬದಿಯನ್ನು ಚೆನ್ನಾಗಿ ಕರಿಯಬೇಕು.
* ಈಗ ರುಚಿರುಚಿಯಾದ ಮಂಗಳೂರು ಬನ್ಸ್ ಅನ್ನು ಚಟ್ನಿಯೊಂದಿಗೆ ಸವಿಯಿರಿ.