ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ತಿಂಡಿ ಮಾಡುವುದೇ ದೊಡ್ಡ ಕೆಲಸ ಎನ್ನುವಂತಾಗಿದೆ. ಅದರಲ್ಲೂ ಪ್ರತಿದಿನ ಅವಲಕ್ಕಿ, ಉಪ್ಪಿಟ್ಟು, ದೋಸೆ, ಇಡ್ಲಿ ಇದೆಲ್ಲವನ್ನು ತಿಂದು ಬೇಜಾರಾಗಿದೆ. ಬೇರೆ ಏನನ್ನಾದರೂ ತಿನ್ನಬೇಕು ಎಂದರೆ ಅದನ್ನು ತಯಾರಿಸಲು ಬೆಳಿಗ್ಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸಮಯವೇ ಎಲ್ಲ ಎನ್ನುವಂತ ಬೆಂಗಳೂರಿಗರೇ ಬೆಳಿಗ್ಗೆ ತಿಂಡಿ ತಿನ್ನಲು ಸಮಯವೂ ಇರುವುದಿಲ್ಲ. ಹೀಗಿರುವಾಗ ಥಟ್ ಅಂತ ಕೇವಲ 10 ರಿಂದ 15 ನಿಮಿಷಗಳಲ್ಲೇ ಸೌತೆಕಾಯಿ ದೋಸೆ ಮಾಡಬಹುದು.
ಹೌದು, ಸಾಮಾನ್ಯವಾಗಿ ದೋಸೆ ತಯಾರಿಸುವಂತೆ ಇದಕ್ಕೆ ಅಕ್ಕಿ ನೆನೆಯಿಡುವ ಅವಶ್ಯಕತೆಯಿಲ್ಲ. ಅಕ್ಕಿ ಹಿಟ್ಟು ಬೇಕೇ ಬೇಕು ಎನ್ನುವ ಹಾಗೆಯೂ ಇಲ್ಲ. ಮನೆಯಲ್ಲಿರುವ ಹಿಟ್ಟನ್ನು ಬಳಸಿ ಸರಳವಾಗಿ ಸೌತೆಕಾಯಿ ದೋಸೆ ತಯಾರಿಸಿ.
ಬೇಕಾಗುವ ಸಾಮಗ್ರಿಗಳು:
ಸೌತೆಕಾಯಿ
ಉಪ್ಪು
ಕೆಂಪು ಖಾರದ ಪುಡಿ
ಗೋಧಿ ಹಿಟ್ಟು (ಮನೆಯಲ್ಲಿರುವ ಯಾವ ಹಿಟ್ಟನ್ನು ಬಳಸಬಹುದು)
ಅಕ್ಕಿ ಹಿಟ್ಟು
ಕಡಲೆ ಹಿಟ್ಟು
ಮೊಸರು
ಮಾಡುವ ವಿಧಾನ:
ಮೊದಲಿಗೆ ಸೌತೆಕಾಯಿಯನ್ನು ತುರಿದುಕೊಳ್ಳಬೇಕು, ಬಳಿಕ ಒಂದು ಪಾತ್ರೆಗೆ ಸೌತೆಕಾಯಿಯನ್ನು ಹಾಕಿ, ಅದಕ್ಕೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಹಾಕಬೇಕು, ಬಳಿಕ ಅದಕ್ಕೆ ಮೊಸರು, ಉಪ್ಪು, ಖಾರದ ಪುಡಿ, ತೆಂಗಿನ ತುರಿ, ನೀರನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ದೋಸೆ ಹಿಟ್ಟಿನ ಹದಕ್ಕೆ ಬರುವ ಹಾಗೇ ಕಲಸಿಕೊಳ್ಳಬೇಕು. ಬಳಿಕ ಕಾದ ತವೆಯ ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ಬಳಿಕ ಹಿಟ್ಟನ್ನು ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ಗರಿಗರಿಯಾದ ಸೌತೆಕಾಯಿ ದೋಸೆ ತಯಾರಾಗುತ್ತದೆ. ದೋಸೆಯನ್ನು ಚಟ್ನಿ ಅಥವಾ ಖಾರ ಹಾಕಿರುವುದರಿಂದ ಮೊಸರಿನ ಜೊತೆಗೆ ತಿನ್ನಬಹುದು.