ಹಲಸಿನಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಹಲಸಿನ ಸೀಸನ್‌ಗೇ ಅಂತಾನೇ ಕಾಯ್ತ ಇರ್ತಾರೆ. ಬರೀ ಹಲಸಿನ ಹಣ್ಣಿನಿಂದ ಮಾತ್ರ ಬೇರೆ ಬೇರೆ ಖಾದ್ಯಗಳನ್ನು ಮಾಡುವುದಿಲ್ಲ. ಹಲಸಿನ ಕಾಯಿ ಅಂದ್ರೆ ಹಲಸಿನ ಗುಜ್ಜೆ ಇಂದಲೂ ಪಲ್ಯ, ಕಬಾಬ್ ಹೀಗೆ ತಯಾರು ಮಾಡುತ್ತಾರೆ. ಗಂಜಿ ಜೊತೆ ಹಲಸಿನ ಗುಜ್ಜೆಯ ಪಲ್ಯ ಅಂತೂ ಸೂಪರ್ ಕಾಂಬಿನೇಷನ್. ನಿಮ್ಗೂ ಹಲಸಿನ ಗುಜ್ಜೆ ಪಲ್ಯ ತಿನ್ಬೇಕು ಅಂತಾ ಅನ್ನಿಸುತ್ತಿದ್ಯಾ? ಹಾಗಿದ್ರೆ ಗುಜ್ಜೆ ಪಲ್ಯ ಹೇಗೆ ಮಾಡೋದು ಅಂತಾ ತಿಳಿಯೋಣ.
ಬೇಕಾಗಿರುವ ಸಾಮಾಗ್ರಿಗಳು:
ಹಲಸಿನ ಗುಜ್ಜೆ – 1/2 ಭಾಗ
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಅಡುಗೆ ಎಣ್ಣೆ – 4 ರಿಂದ 6 ಚಮಚ
ಸಾಸಿವೆ – 1/2 ಟೀಸ್ಪೂನ್
ಅರಿಶಿನ ಪುಡಿ – 1 ಚಿಟಿಕೆ
ಇಂಗು – 1 ಚಿಟಿಕೆ
ಕರಿಬೇವು – 4-5 ಎಲೆಗಳು
ಬೆಲ್ಲ – ಸ್ವಲ್ಪ
ಹುಣಸೆಹಣ್ಣು – 1
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ 1/2 ಟೀಸ್ಪೂನ್
ಕೆಂಪು ಮೆಣಸು – 3
ತುರಿದ ತೆಂಗಿನಕಾಯಿ – 1/2 ಕಪ್
ಕೊತ್ತಂಬರಿ – 1 ಟೀಸ್ಪೂನ್
ಮಾಡುವ ವಿಧಾನ:
* ಗುಜ್ಜೆಯ ಹೊರಗಿನ ಮುಳ್ಳಿನ ಚರ್ಮ ಮತ್ತು ಮಧ್ಯಭಾಗವನ್ನು ತೆಗೆದುಹಾಕಿ. ಒಳಗಿನ ತಿರುಳನ್ನು ಒಂದು ಇಂಚಿನ ತುಂಡುಗಳಾಗಿ ಕತ್ತರಿಸಿ.
* 10 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ. ನೀರನ್ನು ಬಸಿದು ಪಕ್ಕಕ್ಕೆ ಇರಿಸಿ.
* ದಪ್ಪ ತಳದ ಕಡಾಯಿ ಅಥವಾ ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ.
* ಕತ್ತರಿಸಿದ ಹಲಸಿನ ತುಂಡುಗಳು, ಉಪ್ಪು, ಹುಣಸೆಹಣ್ಣು, ಬೆಲ್ಲ, ಕೆಂಪು ಮೆಣಸಿನ ಪುಡಿ, ಅರಿಶಿನ ಹಾಕಿ. ಈಗ ಒಂದು ಕಪ್ ನೀರು ಸೇರಿಸಿ ಒಂದು ಸೀಟಿ ಬರುವವರೆಗೆ ಬೇಯಿಸಿ.
* ಬಳಿಕ ಬೇಯಿಸಿದ ಗುಜ್ಜೆಯನ್ನು ಅನ್ನು ಸ್ವಲ್ಪ ಮ್ಯಾಶ್ ಮಾಡಿ.
* ತೆಂಗಿನಕಾಯಿ, ಹುರಿದ ಮೆಂತ್ಯ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಣಗಿಸಿ ಪುಡಿ ಮಾಡಿ ಸೇರಿಸಿ.
* ಬಳಿಕ ಉಳಿದ ನೀರು ಆರಿಸಿ, ಮಸಾಲೆ ಚೆನ್ನಾಗಿ ಹಿಡಿದುಕೊಳ್ಳುವವರೆಗೆ ಬೇಯಿಸಿ.
* ತೆಂಗಿನ ಎಣ್ಣೆ ಬಿಸಿ ಮಾಡಿ ಸಾಸಿವೆ, ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿದ ಒಗ್ಗರಣೆಯನ್ನು ಗುಜ್ಜೆ ಪಲ್ಯಕ್ಕೆ ಹಾಕಿ.
* ಈಗ ರುಚಿರುಚಿಯಾದ ಗುಜ್ಜೆ ಪಲ್ಯ ಗಂಜಿಯೊಂದಿಗೆ ಸವಿಯಲು ಸಿದ್ಧ.