ಕರ್ನಾಟಕದ ಅತ್ಯಂತ ಫೇಮಸ್ ಸಿಹಿ ಅದೆಂದರೆ ಮೈಸೂರ್ ಪಾಕ್. ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಬಳಸಿ ಮಾಡಲಾಗುವ ಈ ಸಿಹಿ ಇಡಿ ದೇಶದಲ್ಲೇ ಜನಪ್ರಿಯ. ಇದನ್ನು ತಯಾರಿಸಲು ತಾಳ್ಮೆ ಹಾಗೂ ಸಮಯ ಅತ್ಯಗತ್ಯ. ರುಚಿಕರವಾದ ಮೈಸೂರ್ ಪಾಕ್‌ಗೆ ವಿಭಿನ್ನ ಫ್ಲೇವರ್ ಸೇರಿಸಿ, ಇನ್ನೂ ಹೆಚ್ಚು ರುಚಿಕರವಾಗಿ ಮಾಡಬಹುದು. ನಾವೀದಿನ ರುಚಿಕರವಾದ ಚಾಕ್ಲೇಟ್ ಮೈಸೂರ್ ಪಾಕ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ.
ಬೇಕಾಗುವ ಪದಾರ್ಥಗಳು:
ಕಡಲೆ ಹಿಟ್ಟು – 1 ಕಪ್
ಸಕ್ಕರೆ – ಒಂದೂವರೆ ಕಪ್
ತುಪ್ಪ – 1 ಕಪ್
ಕೋಕೋ ಪೌಡರ್ – 1 ಟೀಸ್ಪೂನ್ ಇದನ್ನೂ ಓದಿ: ಬೇಕರಿ ಮಾದರಿಯ ಪಂಪ್ಕಿನ್ ರೋಲ್ ಮಾಡಿ…!
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ, ಅದನ್ನು ಬೆಚ್ಚಗೆ ಸಿದ್ಧವಾಗಿಡಿ.
* ಚೌಕಾಕಾರದ ಟ್ರೇ ಅಥವಾ ಬಟ್ಟಲಿಗೆ ಒಂದೆರಡು ಟೀಸ್ಪೂನ್ ತುಪ್ಪವನ್ನು ಗ್ರೀಸ್ ಮಾಡಿ ಬದಿಗಿಡಿ.
* ಕಡಲೆ ಹಿಟ್ಟನ್ನು ಚೆನ್ನಾಗಿ ಶೋಧಿಸಿ, ದಪ್ಪ ತಳವಿರುವ ಬಾಣಲೆಯಲ್ಲಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಸುಮಾರು 3-5 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಪಕ್ಕಕ್ಕೆ ಇರಿಸಿ.
* ಕೋಕೋ ಪೌಡರ್ ಜೊತೆಗೆ ಅರ್ಧ ಕಪ್ ತುಪ್ಪವನ್ನು ಕಡಲೆ ಹಿಟ್ಟಿಗೆ ಸೇರಿಸಿ. ಅದರಲ್ಲಿ ಉಂಡೆಗಳು ಹೋಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
* ಮತ್ತೊಂದು ಬಾಣಲೆಗೆ ಮುಕ್ಕಾಲು ಕಪ್ ನೀರು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.
* ಸಕ್ಕರೆ ಮಿಶ್ರಣ ಕುದಿಯಲು ಪ್ರಾರಂಭಿಸಿದಾಗ ಕಡಲೆ ಹಿಟ್ಟು ಹಾಗೂ ತುಪ್ಪದ ಮಿಶ್ರಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
* ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.
* ಇಡೀ ಮಿಶ್ರಣ ದಪ್ಪಗೆ ಮುದ್ದೆಯಾಗುವವರೆಗೆ ಮಿಶ್ರಣ ಮಾಡಿ. ನಂತರ ಉರಿಯನ್ನು ಆಫ್ ಮಾಡಿ.
* ಈಗ ಗ್ರೀಸ್ ಮಾಡಿದ ಟ್ರೇಗೆ ಮಿಶ್ರಣವನ್ನು ಸುರಿಯಿರಿ ಹಾಗೂ ಸ್ವಲ್ಪ ತಣ್ಣಗಾಗಲು ಬಿಡಿ.
* 10-15 ನಿಮಿಷಗಳ ನಂತರ ಸ್ವಲ್ಪ ಗಟ್ಟಿಯಾದಾಗ ಅದನ್ನು ಚಾಕು ಸಹಾಯದಿಂದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
* ಇದೀಗ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್ ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಇದನ್ನೂ ಓದಿ: ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್
Web Stories