ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಒಂದೆಡೆ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‍ನ ಪ್ರಭಾವಿ ನಾಯಕರಿಬ್ಬರ ಮಧ್ಯೆ ಮಧ್ಯರಾತ್ರಿ ಜಗಳ ನಡೆದಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮಧ್ಯೆ ರಾತ್ರೋರಾತ್ರಿ ಮಾತಿನ ಚಕಮಕಿ ನಡೆದಿದೆ. ಇದರಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ತಾಂಡವಾಡುತ್ತಿದ್ದರೂ ಇವರಿಗೆ ರಾಜಕೀಯವೇ ಮುಖ್ಯವಾಯಿತಾ ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಮೂಡಿದೆ.
Advertisement
Advertisement
ನಗರದ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಧ್ಯೆ ಆರೋಪ- ಪ್ರತಾರೋಪಗಳ ಸುರಿಮಳೆಯೇ ಸುರಿದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ನೀವು ಮುಂದಾಗಿದ್ದೀರಿ. ಖರ್ಗೆ, ಮುನಿಯಪ್ಪ ಮುಗಿಸಿದ್ದು ಆಯ್ತು, ಈಗ ನಿಮಗೆ ನಾನು ಟಾರ್ಗೆಟ್ ಆಗಿದ್ದೇನಾ. ನನ್ನ ವಿರುದ್ಧ ನೀವು ಯಾರನ್ನು ಎತ್ತಿ ಕಟ್ಟಿದ್ದೀರಿ ಅನ್ನೋದೆಲ್ಲಾ ಗೊತ್ತು ಎಂದು ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಕಿಡಿಕಾರಿದ್ದಾರೆ ಎನ್ನಲಾಗಿದೆ.
Advertisement
ನಡೆದಿದ್ದು ಏನು?:
ಗುರುವಾರ ಸಂಜೆ ಸಿದ್ದರಾಮಯ್ಯ ಅವರನ್ನು ದಲಿತ ಮುಖಂಡರು ಭೇಟಿಯಾಗಿದ್ದರು. ಈ ವೇಳೆ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಪರಮೇಶ್ವರ್ ಮುಗಿಸಲು ಹುನ್ನಾರ ನಡೆಸುತ್ತಿದ್ದೀರಿ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಡರಾತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಕರೆಸಿಕೊಂಡಿದ್ದಾರೆ.
Advertisement
ಈ ಸಂದರ್ಭದಲ್ಲಿ ಇಬ್ಬರು ಮಾತುತಕೆ ನಡೆಸಿದ್ದು, ಏನ್ರೀ ಪರಮೇಶ್ವರ್, ನಾನು ನಿಮ್ಮ ವಿರುದ್ಧ ಏನು ಪಿತೂರಿ ಮಾಡಿದ್ದೇನೆ. ಯಾಕೆ ದಲಿತ ನಾಯಕರುಗಳು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನೀವೇನಾ ಅವರನ್ನು ಮನೆಗೆ ಕಳುಹಿಸಿ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾನು ಯಾರನ್ನೂ ಕಳುಹಿಸಿ ಕೊಟ್ಟಿಲ್ಲ. ಆದರೆ ರಾಜಣ್ಣ ನಡೆದುಕೊಳ್ಳುವ ರೀತಿ ಹಾಗಿದೆ. ನಿಮ್ಮ ಕುಮ್ಮಕ್ಕಿಲ್ಲದೆ ಅವರು ಹಾಗೇ ಮಾತನಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಪರಮೇಶ್ವರ್ ಉತ್ತರಿಸಿದ್ದಾರೆ.
ಅಲ್ರೀ..ರಾಜಣ್ಣ ಮಾತನಾಡಿದ್ರೆ ನಾನೇನು ಮಾಡಲಿ. ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ನಾನಲ್ಲ ಎಂದು ಮಾಜಿ ಸಿಎಂ ಹೇಳಿದ್ದಕ್ಕೆ, ರಾಜಣ್ಣ ಪ್ರತಿಬಾರಿಯೂ ನಿಮ್ಮ ಪರವಾಗಿ ಮಾತನಾಡುತ್ತಾರೆ. ನೀವೇ ನನ್ನ ನಾಯಕ ಎಂದು ನಿಮ್ಮ ಹೆಸರನ್ನು ಆಗಾಗ ಹೇಳುತ್ತಾರೆ. ನೀವು ಪ್ರತಿಬಾರಿ ಅವರ ಪರವಾಗಿ ವಕಾಲತ್ತು ವಹಿಸಿದ್ದೀರಿ. ಈಗ ಅವರು ಸುಖಾಸುಮ್ಮನೆ ನನ್ನ ವಿರುದ್ಧ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ನೋಡಿ, ಸಾರ್, ಮೊದಲೇ ದಲಿತ ನಾಯಕರ ಏಳಿಗೆಗೆ ನೀವು ಅಡ್ಡಿ ಆಗಿದ್ದೀರಿ ಎಂಬ ಆರೋಪವಿದೆ. ಇದು ದೊಡ್ಡ ಮಟ್ಟಕ್ಕೆ ಹೋದರೆ ನಾನು ಜವಾಬ್ದಾರನಲ್ಲ. ನನ್ನ ತಾಳ್ಮೆಗೂ ಒಂದು ಮಿತಿ ಇದೆ ಎಂದು ಡಿಸಿಎಂ ಉತ್ತರಿಸಿದ್ದಾರೆ.
ಈ ಮಾತಿಗೆ, ಏನ್ರೀ ಪರಮೇಶ್ವರ್, ಏನೇನೋ ಮಾತನಾಡುತ್ತಿದ್ದೀರಿ. ರಾಜಣ್ಣ ಮಾತನಾಡೋದಕ್ಕೂ, ದಲಿತ ನಾಯಕರಿಗೆ ಹಿನ್ನಡೆ ಆಗೋದಕ್ಕೂ ಏನ್ ಸಂಬಂಧ ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದಾಗ, ತುಮಕೂರಲ್ಲಿ ರಾಜಣ್ಣ ಏನೆಲ್ಲಾ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಅವರಿಂದಾಗಿ, ಮೈತ್ರಿಗೂ ಕೂಡ ಹಿನ್ನಡೆ ಆಗಿದೆ. ಈಗಲೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಅಂದರೆ ಏನರ್ಥ ಎಂದು ಡಿಸಿಎಂ ಕೂಡ ಮರು ಪ್ರಶ್ನೆ ಹಾಕಿದ್ದಾರೆ.
ಖಂಡಿತ ನೀವು ಹೇಳಿದ ಅಷ್ಟು ವಿಷಯ ಕೂಡ ಕೆಪಿಸಿಸಿ ಅಧ್ಯಕ್ಷರ ಗಮನದಲ್ಲಿದೆ. ನೀವು ಹೇಳಿ ಅಧ್ಯಕ್ಷರಿಗೆ ನಾನೂ ಹೇಳ್ತೀನಿ. ರಾಜಣ್ಣ ವಿರುದ್ಧ ಖಂಡಿತ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿಎಂ, ನೋಡಿ ಸರ್, ಮೊದಲೇ ಖರ್ಗೆ, ಮುನಿಯಪ್ಪ ಇಬ್ಬರೂ ಸೋತಿದ್ದಾರೆ. ರಾಜ್ಯದಲ್ಲಿ ಎಲ್ಲ ದಲಿತ ನಾಯಕರೂ ಕೂಡ ಸೋತಿದ್ದಾರೆ ಅನ್ನೋ ಬೇಸರ ಸಮುದಾಯದಲ್ಲಿದೆ. ಈಗ ನನಗೂ ತೊಂದರೆ ಕೊಟ್ಟರೆ ಸಮುದಾಯಕ್ಕೆ ಬೇರೆಯದ್ದೇ ಸಂದೇಶ ರವಾನೆ ಆಗುತ್ತಿದೆ ಎಂದು ತಿಳಿಸುವ ಪ್ರಯತ್ನ ನಡೆಸಿದ್ದಾರೆ.
ಪರಮೇಶ್ವರ್ ನೀವು ಬೇಜಾರು ಮಾಡ್ಕೋಬೇಡಿ. ರಾಜಣ್ಣನನ್ನು ಕರೆದು ನಾನು ಮಾತನಾಡುತ್ತೇನೆ. ಇದುವರೆಗೆ ಅವರು ಮಾತನಾಡಿದ ವಿಚಾರಕ್ಕೆ ಪಕ್ಷ ಶಿಸ್ತು ಕ್ರಮ ಕೈಗೊಂಡರೂ ನನ್ನದೇನೂ ವಿರೋಧವಿಲ್ಲ ಎಂದು ಸಿದ್ದರಾಮಯ್ಯ ಈ ವೇಳೆ ಹೇಳಿದ್ದಾರೆ. ಇದಕ್ಕೆ ಪರಮೇಶ್ವರ್, ನಿಮ್ಮದು ಬರೀ ಇಂತಹುದ್ದೇ ಆಯ್ತು. ಮೊದಲು ಕ್ರಮವಾಗಲಿ ಆಮೇಲೆ ಕೂತು ಮಾತನಾಡೋಣ ಬಿಡಿ ಎಂದು ಡಿಸಿಎಂ ಅವರು ಕೋಪದಿಂದ ಎದ್ದು ಹೊರ ನಡೆದಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.