ಮೈಸೂರು: ಚಾಮುಂಡಿಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮಹಾರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಂದು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಯದುವಂಶದ ರಾಜ ಯದುವೀರ್ ದೇವಿಯ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.
ರಥೋತ್ಸವ ಬಳಿಕ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವ ಇದಾಗಿದೆ. ಈ ಬಾರಿ ದಸರಾ ಉತ್ಸವ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ. ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ ಎಂದು ಹೇಳಿದರು.
ಇನ್ನು ಈ ಬಾರಿ ದಸರಾಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಉತ್ತಮವಾದ ಜೀವನ ನಡೆಸಲಿ ಎಂದರು.
ಇನ್ನು ರಾಣಿ ತ್ರಿಷಿಕಾ ಸೀಮಂತ ಕಾರ್ಯದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ, ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜಮನೆತದ ಸೀಮಂತ ಕಾರ್ಯದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಸಂಪ್ರದಾಯಗಳ ಪ್ರಕಾರ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಚರ್ಚೆ ಬೇಡ ಎಂದರು.
ಬಳಿಕ ಮಾತನಾಡಿದ ರಾಜ ಯದುವೀರ್, ಈ ಬಾರಿ ದಸರಾ ಯಶಸ್ವಿಯಾಗಿ ಆಚರಣೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಸಮಯಕ್ಕೆ ಸರಿಯಾಗಿ ನೇರವೇರಿವೆ. ಯಾವುದೇ ಅಡಚಣೆಗಳಿಲ್ಲದೇ ನೆರವೇರಿದೆ. ವಿಶ್ವವಿಖ್ಯಾತ ದಸರಾ ಸುಸೂತ್ರವಾಗಿ ನೆರವೇರಿದ್ದು ನಮಗೆ ಸಂತೋಷ ತಂದಿದೆ. ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ದೇವಿಗೆ ರಥೋತ್ಸವದ ಮೂಲಕ ಗೌರವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಇನ್ನು ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಜೊತೆಗೆ ರಥ ದೇವಾಲಯದ ಸುತ್ತಾ ಒಂದು ಸುತ್ತು ಹಾಕಿತು. ಇದೇ ವೇಳೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.