ಗದಗ: ಸವಾರನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನರಗುಂದ ಹೊರವಲಯದಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯ ಪುಣೆ ಮೂಲದ ರತ್ನಮಾಲಾ (21) ಮೃತ ದುರ್ದೈವಿ. ಈ ಘಟನೆಯಲ್ಲಿ ನಿಖಿಲ್ ಹಾತಪಡೆ (25)ತಲೆಗೆ ಪೆಟ್ಟು ಬಿದ್ದಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ನಿಖಿಲ್ ಹಾಗೂ ರತ್ನಮಾಲಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿಯು ಕರ್ನಾಟಕದ ಐತಿಹಾಸಿಕ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದರು. ಮಹಾರಾಷ್ಟ್ರದಿಂದ ಹಂಪಿ, ಬಾದಾಮಿ, ಬನಶಂಕರಿ ವೀಕ್ಷಿಸಿದ್ದ ಪ್ರೇಮಿಗಳು ನರಗುಂದ ಮಾರ್ಗವಾಗಿ ಹುಬ್ಬಳ್ಳಿ ಹೊರಟಿದ್ದರು. ಆದರೆ ವೇಗವಾಗಿ ಬೈಕ್ ಓಡಿಸುತ್ತಿದ್ದ ಪರಿಣಾಮ ನರಗುಂದ ಹೊರವಲಯದಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ರತ್ನಮಾಲಾ ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಖಿಲ್ ತಲೆಗೂ ಹೊಡೆತ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರೇಮಿಗಳನ್ನು ರಕ್ಷಿಸಲು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ. ನಿಖಿಲ್ ಸ್ಥಿತಿ ಚಿಂತಾಚನಕವಾಗಿದ್ದರಿಂದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಾಗಿದೆ. ಈ ಕುರಿತು ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.