ಮುಂಬೈ: ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆಯು ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗೆ ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ.
ಮುಂಬೈನಲ್ಲಿ ಇಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಶರದ್ ಪವಾರ್ ಸೇರಿದಂತೆ ಶಿವಸೇನೆ, ಕಾಂಗ್ರೆಸ್, ಎನ್ಸಿಪಿಯ ಅನೇಕ ನಾಯಕರು ಸಭೆ ನಡೆಸಿದರು. ಈ ವೇಳೆ ಮೈತ್ರಿ ಸರ್ಕಾರ ರಚನೆ ಹಾಗೂ ಐದು ವರ್ಷಗಳ ಕಾಲ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರಕ್ಕೆ ಒಪ್ಪಿಗೆ ಸಿಕ್ಕಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಹಾಗೂ ಎನ್ಸಿಪಿ ಪ್ರಮುಖ ಖಾತೆಗಳ ಬೇಡಿಕೆ ಇಟ್ಟಿವೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಸಭೆಯ ಬಳಿಕ ಮಾತನಾಡಿದ ಶರದ್ ಪವಾರ್, ಶನಿವಾರ ಮೂರು ಪಕ್ಷಗಳು ಸೇರಿ ಸುದ್ದಿಗೋಷ್ಠಿ ನಡೆಸುತ್ತೇವೆ. ಮೈತ್ರಿ ಸರ್ಕಾರ ರಚನೆಯ ಬಗ್ಗೆ ಚರ್ಚೆ ಮುಂದುವರಿದಿದೆ. ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರನ್ನು ಯಾವಾಗ ಭೇಟಿಯಾಗುವ ಎನ್ನುವ ವಿಚಾರವನ್ನು ನಾಳೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಶಿವಸೇನೆ ಜೊತೆಗೆ ಮೈತ್ರಿಗೆ ಎನ್ಸಿಪಿ ಸಿದ್ಧವಾಗಿದ್ದರೂ ಕಾಂಗ್ರೆಸ್ ತನ್ನ ಒಪ್ಪಿಗೆ ನೀಡಿರಲಿಲ್ಲ. ನಮ್ಮ ಪಕ್ಷದ ವಿರೋಧಿ ಸಿದ್ಧಾಂತವನ್ನು ಹೊಂದಿರುವ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡರೆ ಇದರಿಂದ ನಮಗೆ ನಷ್ಟ ಎನ್ನುವ ವಿಚಾರಗಳು ಮಹಾರಾಷ್ಟ್ರ ಕೈ ನಾಯಕರಿಂದ ತೂರಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಆದರೆ ಬುಧವಾರ ಸೋನಿಯಾ ಗಾಂಧಿ ಮೈತ್ರಿಗೆ ಒಪ್ಪಿದ್ದಾರೆ ಎಂದು ಎನ್ಸಿಪಿ ಸಂಸದ ಮಜೀದ್ ಮೆಮನ್ ಅಧಿಕೃತವಾಗಿ ತಿಳಿಸಿದ್ದರು.
Advertisement
ಮೈತ್ರಿ ಸೂತ್ರದ ಪ್ರಕಾರ ಶಿವಸೇನೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ಬಳಿ ಉಳಿಸಿಕೊಳ್ಳಲಿದೆ. ಜೊತೆಗೆ ಶಿವಸೇನೆ ಹಾಗೂ ಎನ್ಸಿಪಿ ತಲಾ 14 ಸಚಿವ ಸ್ಥಾನವನ್ನು ಹಂಚಿಕೊಳ್ಳಲಿವೆ. ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ಗೂ 12 ಸಚಿವ ಸ್ಥಾನ ಸಿಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ ಶಿವಸೇನೆಯೂ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗೆ ಸೇರಿ ಸರ್ಕಾರ ರಚಿಸಲು ಮುಂದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಎನ್ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿದೆ.