Connect with us

Latest

ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

Published

on

-ಇಂದು ಸುಪ್ರೀಂಕೋರ್ಟಿನಲ್ಲಿ ಏನೇನಾಯ್ತು ಇಲ್ಲಿದೆ ಮಾಹಿತಿ

ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಅಂಗಳ ಪ್ರವೇಶಿಸಿದ್ದು, ಇಂದು ನಡೆದ ವಾದ-ಪ್ರತಿವಾದಗಳು ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡಿತ್ತು. ರಾಜ್ಯಪಾಲರ ಪರ ತುಷಾರ್ ಮೆಹ್ತಾ, ಬಿಜೆಪಿ ಪರ ಮುಕುಲ್ ರೋಹ್ಟಗಿ, ಅಜಿತ್ ಪವಾರ್ ಪರ ಮಣಿಂದರ್ ಸಿಂಗ್ ಮತ್ತು ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಪರ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.

ತುಷಾರ್ ಮೆಹ್ತಾ ವಾದ (ರಾಜ್ಯಪಾಲರ ಪರ):
ರಾಜ್ಯಪಾಲರ ಬಹುಮತದ ಪತ್ರವನ್ನು ಇಂದು ಸುಪ್ರೀಂಕೋರ್ಟಿಗೆ ಸಲ್ಲಿಕೆ ಮಾಡಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಚುನಾವಣಾ ಪೂರ್ವ ಮೈತ್ರಿಯಾಗಿ ಕ್ಷೇತ್ರಗಳ ಹೊಂದಾಣಿಕೆ ಆಗಿತ್ತು. ಶಿವಸೇನೆಯ ನಿರ್ಧಾರದಿಂದಾಗಿ ಸ್ಥಿರ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಫಲಿತಾಂಶ ಬಂದ 22 ದಿನ ಕಳೆದರೂ ಸರ್ಕಾರ ರಚನೆಯಾಗಲಿಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು ಎಂದು ರಾಜ್ಯಪಾಲರ ಪರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇದನ್ನೂ ಓದಿ: ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್

ಇದೇ ವೇಳೆ ತುಷಾರ್ ಮೆಹ್ತಾ, ಎನ್‍ಸಿಪಿಯ 54 ಶಾಸಕರ ಬೆಂಬಲ ಪತ್ರ ನೀಡಿದರು. ಎಲ್ಲ ಶಾಸಕರು ದೇವೇಂದ್ರ ಫಡ್ನವೀಸ್ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಎನ್‍ಸಿಪಿ ಶಾಸಕಾಂಗದ ಪಕ್ಷದ ನಾಯಕರಾಗಿ ಅಜಿತ್ ಪವಾರ್ ಆಯ್ಕೆಯಾಗಿದ್ದರು. ನವೆಂಬರ್ 22ರಂದು ಅಜಿತ್ ಪವಾರ್ ನೀಡಿದ ಪತ್ರದಲ್ಲಿ 54 ಶಾಸಕರ ಸಹಿ ಇತ್ತು. ಆ ಪತ್ರವನ್ನು ಸ್ವೀಕರಿಸಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಪತ್ರದಲ್ಲಿಯ ಸಹಿ ಅಸಲಿಯೋ ಅಥವಾ ನಕಲಿಯೋ ಎಂಬುದರ ತನಿಖೆ ಮಾಡೋದು ರಾಜ್ಯಪಾಲರ ಕೆಲಸವಲ್ಲ. ಸ್ಥಿರ ಸರ್ಕಾರಕ್ಕಾಗಿ ಫಡ್ನವೀಸ್ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಅಜಿತ್ ಪವಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ರಾಜ್ಯಪಾಲರ ನಡೆಯನ್ನು ತುಷಾರ್ ಮೆಹ್ತಾ ಸಮರ್ಥಿಸಿಕೊಂಡರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

ಮುಕುಲ್ ರೋಹ್ಟಗಿ ವಾದ(ಬಿಜೆಪಿ ಪರ):
ಸರ್ಕಾರ ರಚನೆ ಮಾಡಿದ ಬಿಜೆಪಿಗೆ 170 ಶಾಸಕರ ಬೆಂಬಲವಿದೆ. ಚುನಾವಣೆಯ ಮಿತ್ರ ನಮಗೆ ಶತ್ರುವಾದರು. ಬೆಂಬಲ ಪತ್ರದಲ್ಲಿರುವ ಎಲ್ಲ ಸಹಿಗಳು ಅಸಲಿ. ಎನ್‍ಸಿಪಿ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಪತ್ರದ ಮೇಲೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದರು. ಇದೇ ವೇಳೆ ಮುಕುಲ್ ರೋಹ್ಟಗಿ ಕರ್ನಾಟಕದ ಪ್ರಕರಣವನ್ನು ಉಲ್ಲೇಖಿಸಿದರು. ವಿಶ್ವಾಸಮತ ಯಾಚನೆ ಮಾಡಲು ನಮಗೆ 10 ದಿನಗಳ ಕಾಲಾವಕಾಶ ನೀಡಬೇಕಿತ್ತು. ರಾಜ್ಯಪಾಲರು ಐದು ಮಾತ್ರ ಟೈಮ್ ಕೊಟ್ಟಿದ್ದಾರೆ. ಆದರೂ ಬಹುಮತ ಯಾಚನೆಗೆ ನಾವು ಸಿದ್ಧವಿದೆ. ರಾಜ್ಯಪಾಲರ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ನೀವು ತೀರ್ಮಾನಿಸಬೇಕು. ನೀವು (ಸುಪ್ರೀಂಕೋರ್ಟ್) ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡುವಂತಿಲ್ಲ.

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಕೂಟ ವಿಚಾರಣೆಗೂ ಮೊದಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಈ ಮಧ್ಯೆ ಎನ್‍ಸಿಪಿ ತನ್ನ ಶಾಸಕರನ್ನು ಹಿಡಿದಿಡ್ಡುಕೊಳ್ಳುವ ಸಲುವಾಗಿ ಕೇರಳಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಿದೆ. ವಿಶ್ವಾಸಮತಯಾಚನೆ ಯಾವಾಗ ಮಾಡಬೇಕು ಎಂಬುದನ್ನು ವಿಧಾನಸಭೆಯಲ್ಲಿ ಸ್ಪೀಕರ್ ತೀರ್ಮಾನ ಮಾಡುತ್ತಾರೆ. ಈ ಮೊದಲು ಹಂಗಾಮಿ ಸ್ಪೀಕರ್ ನೇಮಕವಾದ ನಂತರವೇ ವಿಶ್ವಾಸಮತ ಆಗಬೇಕು. ವಿಧಾನಸಭಾ ಕಲಾಪ ಮತ್ತು ಹಂಗಾಮಿ ಸ್ಪೀಕರ್ ನೇಮಕ ಪ್ರಕ್ರಿಯೆ ಸುಪ್ರೀಂ ವ್ಯಾಪ್ತಿಗೆ ಬರಲ್ಲ. ಹಾಗಾಗಿ ಮಧ್ಯಂತರ ಆದೇಶ ನೀಡಬೇಡಿ. ಶಿವಸೇನೆಗಿಂತ ನಮಗೆ ಎರಡು ಪಟ್ಟ ಬೆಂಬಲವಿದೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

ಹೊಸದಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕರಿಸಬೇಕು. ಎಲ್ಲವೂ ವಿಧಾನಸಭಾ ನಿಯಮಾವಾಳಿಗಳ ಪ್ರಕಾರ ನಡೆಯಲಿ. ಅವಸರೇ ಮಾಡದೇ ನಿಧಾನವಾಗಿ ನಡೆಯಲಿ. ಸುಪ್ರೀಂಕೋರ್ಟ್ ವಿಧಾನಸಭಾ ಕಲಾಪದಲ್ಲಿ ಮಧ್ಯ ಪ್ರವೇಶಿಸುವಂತಿಲ್ಲ. ಹಂಗಾಮಿ ಸ್ಪೀಕರ್ ನೇಮಕ ಮಾಡುವಂತೆ ಆದೇಶಿಸುವಂತಿಲ್ಲ. ವಿಶ್ವಾಸಮತಯಾಚನೆಗೆ ನಮಗೆ 14 ದಿನಗಳ ಅವಕಾಶ ನೀಡಿ. 14 ದಿನ ಆಗಲ್ಲ ಅಂದ್ರೆ ಕನಿಷ್ಠ ಏಳು ದಿನಗಳನ್ನಾದರು ನೀಡಬೇಕು. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಡ್ರಾಮಾ ನೋಡಿ ಅನಾರೋಗ್ಯಕ್ಕೀಡಾದ ಪ್ರೊಫೆಸರ್ – ರಜಾ ಅರ್ಜಿ ವೈರಲ್

ಮಣಿಂದರ್ ಸಿಂಗ್ (ಅಜಿತ್ ಪವಾರ್ ಪರ ವಕೀಲ): ನವೆಂಬರ್ 22ರಂದು ಎನ್‍ಸಿಪಿ ಪಕ್ಷದ ಶಾಸಕಾಂಗ ನಾಯಕನಾಗಿ ಅಜಿತ್ ಪವಾರ್ ಬೆಂಬಲ ಪತ್ರ ನೀಡಿದ್ದಾರೆ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಇದರಲ್ಲಿ ಅಜಿತ್ ಪವಾರ್ ನಡೆದುಕೊಂಡಿದ್ದು ಸರಿ ಇದೆ. ಇದರಲ್ಲಿ ಅಜಿತ್ ಪವಾರ್ ಅವರದ್ದು ತಪ್ಪಿಲ್ಲ. ಅಜಿತ್ ಪವಾರ್ ಎನ್‍ಸಿಪಿ ನಾಯಕ ಎಂದಾಗ ನ್ಯಾಯಾಧೀಶ ಖನ್ನಾ ಒಂದು ಕ್ಷಣ ನಸು ನಕ್ಕರು. ನಾವು ಕೊಟ್ಟ ಪತ್ರ ಅಸಲಿಯಾಗಿದ್ದು, ಎಲ್ಲ ಸಮಸ್ಯೆಗಳನ್ನು ಪಕ್ಷದೊಳಗೆಯೇ ಬಗೆಹರಿಸಿಕೊಳ್ಳುತ್ತೇವೆ. ನಾನೇ ಎನ್‍ಸಿಪಿ ಆಗಿದ್ದರಿಂದ ಬೇರೆಯವರ ಅರ್ಜಿಯನ್ನು ಸ್ವೀಕಾರ ಮಾಡಬಾರದು. ಎನ್‍ಸಿಪಿಯ ಎಲ್ಲ ಶಾಸಕರು ಬೆಂಬಲ ನೀಡಿದ್ದಾರೆ. ನಾವು ನೀಡಿರುವ ಬೆಂಬಲ ಪತ್ರ ಕಾನೂನು ಮತ್ತು ಸಂವಿಧಾನ ಬದ್ಧವಾಗಿದೆ ಎಂದು ಅಜಿತ್ ಪವಾರ್ ನಡೆಯನ್ನು ಮಣಿಂದರ್ ಸಿಂಗ್ ಸಮರ್ಥಿಸಿಕೊಂಡರು. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

ಕಪಿಲ್ ಸಿಬಲ್ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ನವೆಂಬರ್ 23ಕ್ಕೆ ನಾವು ಹಕ್ಕು ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಾಜ್ಯಪಾಲರು ನಮಗೆ ಅವಕಾಶ ನೀಡಲಿಲ್ಲ. ನವೆಂಬರ್ 22 ರಾತ್ರಿ 7ರಿಂದ ಬೆಳಗ್ಗೆ 5.47ರ ನಡುವೆ ಏನಾಯ್ತು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಅಕ್ಟೋಬರ್ 24ರಿಂದ ನವೆಂಬರ್ 22ರವರೆಗೆ ರಾಜ್ಯಪಾಲರು ಕಾಯುತ್ತಿದ್ದರು. ಇಷ್ಟು ದಿನ ಕಾದಿದ್ದ ರಾಜ್ಯಪಾಲರಿಗೆ ಒಂದು ಕಾಯಲು ಆಗಲಿಲ್ಲ. ಒಂದು ದಿನ ಮೊದಲೇ ಸುದ್ದಿಗೋಷ್ಠಿ ನಡೆಸಿ ಉದ್ಧವ್ ಠಾಕ್ರೆ ನಮ್ಮ ಸಿಎಂ ಎಂದು ಘೋಷಣೆ ಮಾಡಲಾಗಿತ್ತು. ಎನ್‍ಸಿಪಿ ನಿರ್ಣಯ ಪತ್ರವನ್ನು ತೋರಿಸಿಲ್ಲ. ಈ ಕ್ಷಣಕ್ಕೂ 54 ಶಾಸಕರು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವಶ್ಯವಿದ್ದರೆ ನಾವು ಅಫಡವಿಟ್ ಸಲ್ಲಿಸಲು ಸಿದ್ಧರಿದ್ದೇವೆ. ಬಿಜೆಪಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಎನ್‍ಸಿಪಿ ತೀರ್ಮಾನ ತೆಗೆದುಕೊಂಡಿರಲಿಲ್ಲ. ರಾಜ್ಯಪಾಲರು ಬಿಜೆಪಿಗೆ ಅನಕೂಲವಾಗುವಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ವಿವೇಚನೆ ಮೀರಿ ವರ್ತಿಸಿದ್ದಾರೆ. ಹಾಗಾಗಿ ಬೇಗ ಬಹುಮತ ಸಾಬೀತಿಗೆ ಸೂಚಿಸಬೇಕೆಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ

ರಾತ್ರಿಯವರೆಗೂ ಕಾಯೋದು ಬೇಡ, ಇವತ್ತೆ ಅಂದ್ರೆ ಹಗಲಲ್ಲೇ ಬಹುಮತ ಪ್ರಕ್ರಿಯೆ ನಡೆಯಲಿ. ಅಜಿತ್ ಪವಾರ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಜಿತ್ ಪವಾರ್ ನೀಡಿದ ಪತ್ರಕ್ಕೆ ಯಾವುದೇ ಬೆಲೆ ನೀಡುವುದು ಬೇಡ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಎನ್‍ಸಿಪಿ ಶಾಸಕರರನ್ನು ಯಾರು ಹೈಜಾಕ್ ಮಾಡಿಲ್ಲ. ಎಲ್ಲರೂ ಶರದ್ ಪವಾರ್ ಜೊತೆಯಲ್ಲಿದ್ದಾರೆ. ಹಿರಿಯ ಶಾಸಕರೊಬ್ಬರು ಸ್ಪೀಕರ್ ಆಗಲಿ, ಅವರೇ ಕಲಾಪ ನಡೆಸಿಕೊಡಲಿ. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

ಶಾಸಕರು ನೀಡಿದ ಸಹಿ ಪತ್ರಕ್ಕೆ ಯಾವುದೇ ಕವರಿಂಗ್ ಲೆಟರ್ ಇರಲಿಲ್ಲ. ಆದರೆ ರಾಜ್ಯಪಾಲರು ಆ ಪತ್ರವನ್ನು ಹೇಗೆ ಒಪ್ಪಿದ್ರೆ ಎಂಬುವುದು ಗೊತ್ತಾಗಿಲ್ಲ. ನಾವು ನಮ್ಮ ಮೈತ್ರಿಗಾಗಿ ಮತ್ತು ಅಜಿತ್ ಪವಾರ್ ಶಾಸಕಾಂಗ ನಾಯಕರಾಗಿ ಮಾಡಲು ಶಾಸಕರು ಸಹಿ ಮಾಡಿದ್ದರು. ಅದೇ ಪತ್ರವನ್ನು ಅಜಿತ್ ಪವಾರ್ ರಾಜ್ಯಪಾಲರಿಗೆ ನೀಡಿದ್ದಾರೆ. 154 ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಆದ್ರೆ ಎನ್‍ಸಿಪಿಯ ಅಫಿಡವಿಟ್ ಮಾನ್ಯ ಮಾಡಲಿಲ್ಲ. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

ಅಭಿಷೇಕ್ ಮನುಸಿಂಘ್ವಿ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ತೆಗೆದುಕೊಂಡ ತೀರ್ಮಾನವನ್ನು ಇಲ್ಲಿಯೂ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಇಂದೇ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಬಿಜೆಪಿಯವರದ್ದು ಅರ್ಧ ಬುದ್ಧಿಯಾಗಿದ್ದು, ಕೆಲ ಶಾಸಕರ ಸಹಿಯನ್ನು ನಕಲು ಮಾಡಿದ್ದಾರೆ. ನಮಗೆ ಏಳು ಪಕ್ಷೇತರರ ಜೊತೆ 161 ಶಾಸಕರ ಬೆಂಬಲ ನಮ್ಮ ಮೈತ್ರಿಗಿದೆ. ಇಂದು ವಿಶ್ವಾಸಮತಯಾಚನೆ ಆದೇಶ ನೀಡಬೇಕು. ತಕ್ಷಣವೇ ವಿಶ್ವಾಸಮತಯಾಚನೆಗೆ ಆದೇಶ ನೀಡಬೇಕು, ಇಲ್ಲವಾದ್ರೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತದೆ. ಅಜಿತ್ ಪವಾರ್ ನೀಡಿರುವ ಪತ್ರಕ್ಕೆ ಯಾವುದೇ ಬೆಲೆ ಇಲ್ಲ. ವಿಶ್ವಾಸಮತಯಾಚನೆ ವೇಳೆ ಬಿಜೆಪಿ ನಮ್ಮನ್ನು ಸೋಲಿಸಿದ್ರೆ, ನಾವು ಒಪ್ಪಿಕೊಳ್ಳುತ್ತೇವೆ. ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡುವಾಗ ಶಾಸಕರು ಹಾಕಿದ ಸಹಿಯುಳ್ಳ ಪತ್ರವನ್ನೇ ಅಜಿತ್ ಪವಾರ್ ನೀಡಿದ್ದಾರೆ. ಅದೇ ಪತ್ರವನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದು ತಪ್ಪು. ತಮಗೆ ಬೆಂಬಲವಿದೆ ಎಂದು ಹೇಳುವ ಬಿಜೆಪಿ 24 ಗಂಟೆಯೊಳಗೆ ಬಹುಮತ ಸಾಬೀತು ಮಾಡಲಿ ಎಂದು ಸಿಂಘ್ವಿ ಸವಾಲು ಎಸೆದರು.

Click to comment

Leave a Reply

Your email address will not be published. Required fields are marked *