ಕೊಲ್ಹಾಪುರ: ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ಸೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಮಿನಿ ಬಸ್‍ನಲ್ಲಿ ಒಟ್ಟು 16 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಪುಣೆಯ ಬಲೆವಾಡಿ ಪ್ರದೇಶದವರಾಗಿದ್ದು, ರತ್ನಾಗಿರಿ ಜಿಲ್ಲೆಯ ಗಣಪತಿಪುಲೆಯಿಂದ ಪುಣೆಗೆ ಈ ಮಿನಿಬಸ್ ತೆರಳುತಿತ್ತು ಎಂಬುದಾಗಿ ವರದಿಯಾಗಿದೆ.
Advertisement
Advertisement
ಅಂತೆಯೇ ಶುಕ್ರವಾರ ತಡರಾತ್ರಿ ಸುಮಾರು 11.45 ಗಂಟೆಗೆ ಶಿವಾಜಿ ಬ್ರಿಡ್ಜ್ ಮೇಲೆ ಬಸ್ ತಲುಪಿದೆ. ಈ ವೇಳೆ ಬಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ರಭಸದಿಂದ ಡಿಕ್ಕಿ ಹೊಡೆದು ಪಂಚಗಂಗಾ ನದಿಗೆ ಉರುಳಿ ಬಿದ್ದಿದೆ. ಡಿಕ್ಕಿ ಹೊಡೆದು ಉರುಳಿ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ 12 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.