ರತ್ಲಾಮ್: ನೀವೆಲ್ಲಾ ದೇವರಿಗೆ ವಿವಿಧ ಅಲಂಕಾರಗಳನ್ನು ಮಾಡಿರುವುದನ್ನು ನೋಡಿರುತ್ತೀರಿ. ಜೊತೆಗೆ ನೋಟಿನ ಹಾರ ಹಾಕಿ ಪೂಜೆ ಮಾಡುವುದನ್ನೂ ನೋಡಿರ್ತೀರಿ. ಆದರೆ 100 ಕೋಟಿ ರೂ. ಮೌಲ್ಯದ ನೋಟಿನಿಂದ ದೇವಿಯ ಅಲಂಕಾರ ಮಾಡಿದರೆ ಹೇಗಿರುತ್ತೆ ಹೇಳಿ.
ಹೌದು, ಮಧ್ಯಪ್ರದೇಶದ ರತ್ಲಾಮ್ ಮಹಾಲಕ್ಷ್ಮಿ ದೇಗುಲದಲ್ಲಿ ದೀಪಾವಳಿ ಪ್ರಯುಕ್ತ 100 ಕೋಟಿ ರೂ. ನೋಟು ಹಾಗೂ ವಿವಿಧ ಬಗೆಯ ಚಿನ್ನಾಭರಣಗಳನ್ನು ದೇವಸ್ಥಾನದ ಮುಖ್ಯ ಅರ್ಚಕರಿಗೆ ತಂದು ನೀಡುತ್ತಾರೆ. ಇದನ್ನೇ ಗರ್ಭಗುಡಿಯಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ.
Advertisement
Advertisement
ಧನ್ ತೇರಾಸ್ ನಿಂದ ಆರಂಭವಾಗಿ ದೀಪಾವಳಿ ಮುಗಿಯುವವರೆಗೆ ಈ ದೇವಸ್ಥಾನಕ್ಕೆ ಬಂದರೆ ನೀವು ದೇವಿಯನ್ನು ನೋಟು ಹಾಗೂ ಚಿನ್ನಾಭರಣಗಳಿಂದ ಅಲಂಕೃತವಾಗಿರುವುದನ್ನು ನೋಡಬಹುದು. ಈ ಬಾರಿಯ ದೀಪಾವಳಿಗೂ ದೇಗುಲವನ್ನು ನೋಟಿನಿಂದ ಅಲಂಕರಿಸಲಾಗಿದೆ. ಕಳೆದ ಬಾರಿ ಹಳೆ ನೋಟಿನಿಂದ ಮಾಡಿದ ಅಲಂಕಾರವಾದರೆ, ಈ ಬಾರಿ ಹೊಸ ನೋಟುಗಳಿಂದ ದೇವಿ ಕಂಗೊಳಿಸುತ್ತಿದ್ದಾಳೆ. 10 ರೂ.ನಿಂದ ತೊಡಗಿ 2000 ರೂ.ಗಳವರೆಗಿನ ಹೊಸ ನೋಟನ್ನೂ ಅಲಂಕಾರಕ್ಕೆ ಬಳಸಲಾಗಿದೆ.
Advertisement
ಇತ್ತೀಚಿನ ವರ್ಷಗಳಲ್ಲಿ ಈ ದೇವಸ್ಥಾನದಲ್ಲಿ ಭಕ್ತರು ನೀಡುವ ಹಣ ಹಾಗೂ ಆಭರಣವನ್ನು ಇಡಲು ಸ್ಥಳದ ಕೊರತೆ ಕಾಡುತ್ತಿದೆ. ಹಾಗಾಗಿ ಹಣ ಹಾಗೂ ಆಭರಣಗಳ ಭದ್ರತೆಗಾಗಿ ಪೊಲೀಸರು ಕೂಡಾ ಆಗಮಿಸುತ್ತಾರೆ. ಪೊಲೀಸರು ದೇವಸ್ಥಾನದ ಸ್ಟ್ರಾಂಗ್ ರೂಮ್ ನಿಂದ ಯಾವುದೇ ಕಳ್ಳತನವಾಗದಂತೆ ನಿಗಾ ವಹಿಸುತ್ತಾರೆ.
Advertisement
ದೀಪಾವಳಿಯ ಸಂಭ್ರಮ ಮುಗಿದ ಬಳಿಕ ಎಲ್ಲಾ ಭಕ್ತರು ಕೂಡಾ ತಾವು ಕೊಟ್ಟ ಹಣ ಹಾಗೂ ಆಭರಣಗಳನ್ನು ವಾಪಸ್ ಪಡೆಯಲು ಬರುತ್ತಾರೆ. ಇದಕ್ಕೂ ಮುನ್ನ ಹಣ ಹಾಗೂ ಆಭರಣ ದೇವಸ್ಥಾನಕ್ಕೆ ಕೊಡಬೇಕಾದರೆ ಪೂಜಾರಿ ದಾಖಲಾತಿ ಪುಸ್ತಕದಲ್ಲಿ ಹೆಸರು ಹಾಗೂ ವಿಳಾಸವನ್ನು ನೋಂದಣಿ ಮಾಡಿಸಿಕೊಳ್ಳುತ್ತಾರೆ. ಬಳಿಕ ಭಕ್ತರಿಗೆ ಟೋಕನ್ ಕೊಡುತ್ತಾರೆ. ಈ ಟೋಕನ್ ತಂದು ವಾಪಸ್ ಕೊಟ್ಟರೆ ಅವರವರ ವಸ್ತುಗಳನ್ನು ಅವರಿಗೇ ವಾಪಸ್ ನೀಡಲಾಗುತ್ತದೆ. ಇದುವರೆಗೆ ಟೋಕನ್ ಪದ್ಧತಿಯಿರಲಿಲ್ಲ. ಈ ವರ್ಷ ಇದನ್ನು ಹೊಸದಾಗಿ ಆರಂಭಿಸಿದ್ದೇವೆ ಎನ್ನುತ್ತಾರೆ ದೇಗುಲದ ಅಧಿಕಾರಿಗಳು.
ದೀಪಾವಳಿ ದಿನ ಇಲ್ಲಿ ಪೂಜೆ ಸಲ್ಲಿಸಿದರೆ ವರ್ಷಪೂರ್ತಿ ಒಳಿತಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಹಣ ಅಥವಾ ಆಭರಣಗಳನ್ನು ಭಕ್ತರು ಈ ದೇಗುಲದಲ್ಲಿಟ್ಟು ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ.