ಬೆಂಗಳೂರು: ಗೋವಾ ಮತ್ತು ಕರ್ನಾಟಕದ ನಡುವೆ ಕಗ್ಗಂಟಾಗಿ ಉಳಿದಿರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಅಂತಿಮ ವಿಚಾರಣೆ ಇಂದಿನಿಂದ ನಡೆಯಲಿದೆ.
ದೆಹಲಿಯಲ್ಲಿರುವ ಮಹದಾಯಿ ನ್ಯಾಯಾಧಿಕರಣದಲ್ಲಿ ಇಂದಿನಿಂದ ಅಂತಿಮ ವಿಚಾರಣೆ ಶುರುವಾಗಲಿದೆ. ಸುಮಾರು 2 ತಿಂಗಳು ಕಾಲ ಅಂತಿಮ ಹಂತದ ವಿಚಾರಣೆ ನಡೆಯಲಿದ್ದು, ಗೋವಾ ಸರ್ಕಾರ ರಾಜ್ಯದ ಮೇಲೆ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಮೊದಲಿಗೆ ವಿಚಾರಣೆಗೆ ಬರಲಿದೆ. ಬಳಿಕ ಮೂಲ ಅರ್ಜಿಯನ್ನು ವಿಚಾರಣೆಗೆ ಕೈಗೊತ್ತಿಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ಪರವಾಗಿ ವಾದ ಮಂಡಿಸಬೇಕಿದ್ದ ವಕೀಲ ಫಾಲಿ ಎಸ್. ನಾರಿಮನ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಚಾರಣೆಗೆ ಗೈರಾಗಲಿದ್ದಾರೆ. ಅವರ ಬದಲಿಗೆ ಹೊಸ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಅಶೋಕ ದೇಸಾಯ್ ನೀರಿನ ಹಂಚಿಕೆಯ ಕುರಿತು ವಾದ ಮಂಡಿಸಲಿದ್ದಾರೆ.
ಆಗಸ್ಟ್ 20ರಂದು ನ್ಯಾಯಾಧಿಕರಣಕ್ಕೆ ಐದು ವರ್ಷ ತುಂಬಲಿದ್ದು ನ್ಯಾಯಧೀಕರಣದ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ನೊಳಗೆ ನ್ಯಾಯಾಧಿಕರಣದಿಂದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.