ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧಿಕರಣದಲ್ಲಿ ಅಂತಿಮ ಹಂತದ ವಾದ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ಮಹದಾಯಿ ವಿವಾದವನ್ನು ಕಳೆದ ಐದು ವರ್ಷದಲ್ಲಿ 105 ದಿನಗಳು ಒಟ್ಟು ವಿಚಾರಣೆ ನಡೆದಿದ್ದು, ಹನ್ನೊಂದು ದಿನಗಳ ಕಾಲ ಅಂತಿಮ ವಿಚಾರಣೆ ನಡೆಸಲಾಗಿದೆ. ನ್ಯಾಯಮೂರ್ತಿ ಜೆ.ಎಂ ಪಾಂಚಾಳ್ ನೇತೃತ್ವದ ತ್ರಿಸದಸ್ಯಪೀಠ ಮೂರು ರಾಜ್ಯಗಳ ವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.
Advertisement
Advertisement
ಆಗಸ್ಟ್ 20ಕ್ಕೆ ನ್ಯಾಯಾಧಿಕರಣದ ಅವಧಿ ಮುಕ್ತಾಯವಾಗಲಿದ್ದು ಜೂನ್ ಅಥವಾ ಜುಲೈನಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ. ಕರ್ನಾಟಕ ಪರ ವಕೀಲ ಅಶೋಕ್ ದೇಸಾಯಿ, ಮೋಹನ್ ಕಾತರಕಿ, ಇಂದಿರಾ ಜೈಸಿಂಗ್ ಹಾಗೂ ಗೋವಾ ಪರ ಆತ್ಮರಾಮ್ ನಾಡಕರ್ಣಿ ವಾದ ಮಂಡಿಸಿದ್ದಾರೆ. ಕಾವೇರಿ ನದಿ ವಿವಾದದಂತೆ ಮಹದಾಯಿ ವಿಚಾರದಲ್ಲೂ ನ್ಯಾಯಸಿಗುವ ವಿಶ್ವಾಸವನ್ನು ರಾಜ್ಯದ ಪರ ವಕೀಲರು ವ್ಯಕ್ತಪಡಿಸಿದ್ದಾರೆ.
Advertisement
ಮಹದಾಯಿ ಅಂತಿಮ ವಿಚಾರಣೆ ಮುಕ್ತಾಯ ಬಳಿಕ ಕರ್ನಾಟಕ ಪರ ಹಿರಿಯ ವಕೀಲ ಮೋಹನ್ ಕಾತರಕಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಕಳೆದ ಆರು ವರ್ಷದಲ್ಲಿ 105 ದಿನಗಳ ಕಾಲ ವಾದ ಮಂಡಿಸಲಾಗಿದೆ. ಅಗಸ್ಟ್ 20 ರೊಳಗೆ ತೀರ್ಪು ನಿರೀಕ್ಷೆ ಮಾಡಬಹುದು. ನಮ್ಮ ಪರವಾಗಿ ಉತ್ತಮ ತೀರ್ಪು ಬರುವ ವಿಶ್ವಾಸವಿದೆ. ಕರ್ನಾಟಕ 14.98 ಟಿಎಂಸಿ ನೀರು ನ್ಯಾಯಾಧಿಕರಣ ಮುಂದೆ ಕೇಳಿದೆ. 7 ಟಿಎಂಸಿ ಹೆಚ್ಚುವರಿ ನೀರಿಗಾಗಿ ಮನವಿ ಮಾಡಿದೆ. ಗೋವಾ 172 ಟಿಎಂಸಿ ನೀರನ್ನು ಕೇಳಿದ್ದು, ಮಹಾರಾಷ್ಟ್ರ 6.34 ಟಿಎಂಸಿ ಗೆ ಬೇಡಿಕೆ ಇಟ್ಟಿದೆ ಎಂದರು.
Advertisement
ಮಹದಾಯಿ ಅಚ್ಚುಕಟ್ಟು ನಲ್ಲಿ ಕೇಂದ್ರದ ಜಲ ಆಯೋಗ ಮಾಹಿತಿ ಪ್ರಕಾರ ಒಟ್ಟು 199.6 ಟಿಎಂಸಿ ನೀರು ಲಭ್ಯವಾಗಲಿದೆ. ಆದರೆ ಗೋವಾ ನೀಡುತ್ತಿರುವ ಮಾಹಿತಿ ಪ್ರಕಾರ 113 ಟಿಎಂಸಿ ನೀರು ಲಭ್ಯ ಎಂಬ ಮಾಹಿತಿ ನೀಡಿದೆ. ನ್ಯಾಯಾಧಿಕರಣ ಮೊದಲು ಒಟ್ಟು ಮಹದಾಯಿ ಅಚ್ಚುಕಟ್ಟಿನ ನೀರಿನ ಮಾಹಿತಿ ನಿರ್ಧರಿಸಲಿದ್ದಾರೆ. ಬಳಿಕ ರಾಜ್ಯವಾರು ವಿಂಗಡನೆ ಮಾಡಲಿದ್ದಾರೆ. ಕರ್ನಾಟಕ ಕುಡಿಯುವ ನೀರಾವರಿ ಯೋಜನೆ ನಿರ್ಮಾಣದಿಂದ ಗೋವಾಕ್ಕೆ ದಕ್ಕೆ ಉಂಟಾಗುವ ಪರಿಶೀಲನೆ ನಡೆಸಲಾಗುತ್ತೆ. ಈ ಆಧಾರದ ಮೇಲೆ ನೀರು ಹಂಚಿಕೆ ಮಾಡಲಾಗುತ್ತದೆ. ಪರಿಣಿತ ತಜ್ಞರು ಮತ್ತು ವೈಜ್ಞಾನಿಕ ಅಂಶಗಳನ್ನು ಆಧರಿಸಿ ನ್ಯಾಯಾಧಿಕರಣ ಮುಂದೆ ವಾದ ಮಂಡಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕಕ ಪರ ವಾದ ಏನಾಗಿತ್ತು?
ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ. ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ತನ್ನ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಹೆಚ್ಚುವರಿಯಾಗಿ ಹುಬ್ಬಳ್ಳಿ – ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕು. ಮಹದಾಯಿಯ ನೀರು ಹು-ಧಾ ಕ್ಕೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು. ಗೋವಾ ಸರ್ಕಾರ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ. ಆದರೆ 173 ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ. ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ. ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ. ಆದರೆ ಮತ್ತೊಂದು ರಾಜ್ಯವು ಯೋಜನೆಯಿಂದ ತನಗೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು ಎಂದು ವಾದ ಮಂಡಿಸಿತ್ತು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
ಗೋವಾ ವಾದ ಏನು?
ಕಳಸಾ ಬಂಡೂರಿ ಯೋಜನೆಯು ಕುಡಿಯುವ ನೀರಿನ ಯೋಜನೆಯಲ್ಲ. ಕರ್ನಾಟಕ ಸರ್ಕಾರ ನೀರಾವರಿಗಾಗಿ ಮಾಡಿರುವ ಯೋಜನೆ. ಮಲಪ್ರಭಾವು ಮಹದಾಯಿಗಿಂತ ಮೂರು ಪಟ್ಟು ದೊಡ್ಡ ನದಿ. ಆ ನದಿಯಲ್ಲಿ ಕರ್ನಾಟಕ ಕಟ್ಟಿರುವ ಅಣೆಕಟ್ಟಿನಲ್ಲಿ ನೀರು ಭರ್ತಿ ಆಗದ ಹಿನ್ನೆಲೆಯಲ್ಲಿ ಮಹದಾಯಿಯನ್ನು ತಿರುಗಿಸಲು ಕರ್ನಾಟಕ ಮುಂದಾಗಿದ್ದು ಇದಕ್ಕೆ ಅವಕಾಶ ನೀಡಬಾರದು.
ಕುಡಿರುವ ನೀರಿಗಾಗಿ ಎಂದು ವಾದ ಮಾಡುತ್ತಿರುವ ಕರ್ನಾಟಕದ ಹುಬ್ಬಳ್ಳಿ – ಧಾರವಾಡ ಪ್ರದೇಶ ಮಹದಾಯಿ ನದಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ನದಿ ಕೊಳ್ಳದ ಹೊರಗಿನ ಪ್ರದೇಶಗಳಿಗೆ ಯಾವ ಕಾರಣಕ್ಕೂ ನೀರು ಹರಿಸಲು ಅವಕಾಶ ನೀಡಬಾರದು. ಹುಬ್ಬಳ್ಳಿ ಧಾರವಾಡದ ಜನಸಂಖ್ಯೆಯ ಏರಿಕೆಯ ಬಗ್ಗೆ ಕರ್ನಾಟಕ ಕೊಟ್ಟಿರುವ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ. 2044ರ ಹೊತ್ತಿಗೆ ಆ ಭಾಗದ ಜನಸಂಖ್ಯೆ ಅಷ್ಟೊಂದು ಪ್ರಮಾಣದಲ್ಲಿ ಏರಲು ಸಾಧ್ಯವೇ ಇಲ್ಲ. ಕರ್ನಾಟಕವು ಮಹದಾಯಿ ಕೊಳ್ಳದಲ್ಲಿ ಲಭ್ಯವಿರುವ ನೀರಿನ ಮೇಲು ಅಂದಾಜು (199.6 ಟಿಎಂಸಿ) ಮಾಡಿದೆ. ಆದರೆ ಅಷ್ಟೊಂದು ನೀರು ಮಹಾದಾಯಿಯಲ್ಲಿ ಇಲ್ಲವೇ ಇಲ್ಲ.
ಪರಿಸರ ನಾಶ: ಕರ್ನಾಟಕ ನೀರಿನ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ವ್ಯಾಪಕ ಅರಣ್ಯ ನಾಶವಾಗಲಿದೆ. ಕರ್ನಾಟಕ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಆಧರಿಸಿರುವ ದಾಖಲೆಗಳಲ್ಲಿ ಲೋಪವಿದೆ. ಮಳೆಯ ಪ್ರಮಾಣ ಮತ್ತು ನೀರಿನ ಲಭ್ಯತೆಯ ಪ್ರಮಾಣ ಬಗ್ಗೆ ಕರ್ನಾಟಕ ಸಲ್ಲಿಸಿರುವ ದಾಖಲೆಗಳಲ್ಲಿನ ಮಾಹಿತಿ ನಂಬಲು ಸಾಧ್ಯವಿಲ್ಲ. ಅನೇಕ ವರ್ಷಗಳ ಕಾಲ ಏಕ ಪ್ರಮಾಣದ ಮಳೆ ಮತ್ತು ನೀರಿನ ಅಳತೆಯನ್ನು ನಮೂದಿಸಲಾಗಿದೆ. ಇದು ಹೇಗೆ ಸಾಧ್ಯ? ಇದು ಬದಲಾಗಬೇಕಲ್ಲವೇ?. ಕರ್ನಾಟಕ ತನ್ನ ಯೋಜನೆಗಳ ಪರಿಸರ ಅಧ್ಯಯನ ನಡೆಸಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕವು ಮಹದಾಯಿ ಕೊಳ್ಳದ ನೀರಿನ ಲೆಕ್ಕ ಹಾಕಲು ಆಧರಿಸಿರುವ ಕೇಂದ್ರ ಜಲ ಮಂಡಳಿಯ ವರದಿಯಲ್ಲೇ ಲೋಪವಿದೆ.
ನೀರಿನ ಪ್ರಮಾಣ ಕಡಿಮೆ: ಕರ್ನಾಟಕದ ಲೆಕ್ಕಾಚಾರದ ಪ್ರಕಾರ ಮಹದಾಯಿ ಕೊಳ್ಳದಲ್ಲಿ ಬೀಳುವ ಮಳೆಯ ಪ್ರಮಾಣಕ್ಕಿಂತ ನದಿಯಲ್ಲಿ ಹೆಚ್ಚು ನೀರಿದೆ ಇದು ಹೇಗೆ ಸಾಧ್ಯ. ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎಂಬ ಕರ್ನಾಟಕದ ನಿಲುವು ಆಧಾರರಹಿತವಾದದ್ದು. ನೀರು ಸಮುದ್ರ ಸೇರುವ ಪ್ರಕ್ರಿಯೆಗೆ ನೈಸರ್ಗಿಕ ಮಹತ್ವವಿದೆ. ಹಾಗೆಯೇ ಗೋವಾದ ಮೀನುಗಾರಿಕೆ ಮತ್ತು ನೌಕಾಯನಗಳು ಸಮುದ್ರ ಸೇರುವ ನೀರನ್ನು ಅವಲಂಬಿಸಿಕೊಂಡಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕಡು ಬಿಸಿಲಿನ ಮಾಸಗಳಲ್ಲಿ ಸಮುದ್ರಕ್ಕೆ ಸೇರಲು ಮಹದಾಯಿಯಲ್ಲಿ ನೀರೆ ಇರುವುದಿಲ್ಲ ಎಂದು ಗೋವಾ ಹೇಳಿದೆ.
ಗೋವಾ ಪ್ಲಾನ್: ಗೋವಾಕ್ಕೆ ಅದರ ಅಗತ್ಯಗಳನ್ನು ಪೂರೈಸಲು 94 ಟಿಎಂಸಿ ನೀರು ಸಾಕು ಎಂಬುದು ಕರ್ನಾಟಕದ ವಾದ. ಆದರೆ ಗೋವಾದ ಹೊಸ ಮಾಸ್ಟರ್ ಪ್ಲಾನ್ ಪ್ರಕಾರ 144 ಟಿಎಂಸಿ ನೀರು ಬೇಕಿದೆ. ಈಗಾಗಲೇ ನ್ಯಾಯಾಧಿಕರಣದ ಗಮನಕ್ಕೆ ತಂದಿದ್ದೇವೆ. ಇನ್ನು ಜಲ ವಿದ್ಯುತ್, ಅರಣ್ಯ ಸಂರಕ್ಷಣ ಮುಂತಾದ ಅಂಶಗಳನ್ನು ಪರಿಗಣಿಸಿದ್ದೇ ಆದರೆ ಗೋವಾಕ್ಕೆ 222 ಟಿಎಂಸಿ ಮಹದಾಯಿ ನೀರು ಬೇಕು. ಆದರೆ ಕರ್ನಾಟಕ ಮತ್ತು ಕರ್ನಾಟಕದ ಪರ ತಜ್ಞ ಸಾಕ್ಷಿಗಳು ಇದೆಲ್ಲವನ್ನು ಪರಿಗಣಿಸಿಲ್ಲ ಅಧ್ಯಯನ ನಡೆಸಿಲ್ಲ. ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿದ್ದೇವೆ. ಆದರೆ ಮಳೆ ಕೊಯ್ಲಿನಿಂದಾಗಿ ಸಂಗ್ರಹವಾಗುವ ನೀರು ಖಾಸಗಿ ಸ್ವತ್ತಾಗಿದ್ದು. ರಾಜ್ಯದ ನದಿ, ಜಲಾಶಯಗಳಿಗೆ ಸೇರುವುದಿಲ್ಲ. ಆದ್ದರಿಂದ ಈ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ರಾಜ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದರು.
ಗೋವಾ ಜೀವನದಿ: ಗೋವಾದ ಬಳಿ 9 ನದಿಗಳಿವೆ. ಕರ್ನಾಟಕದಲ್ಲಿ 35 ನದಿಗಳಿವೆ, ಮಹದಾಯಿ ಗೋವಾದ ಜೀವನದಿಯಾಗಿದೆ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಕಷ್ಟು ನದಿಗಳಿವೆ. 16 ಚೆಕ್ ಡ್ಯಾಂಗಳ ಮೂಲಕ ಈ ನೀರಿನ ಸಂಗ್ರಹಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಕರ್ನಾಟಕ ತನ್ನ ನೀರಿನ ಬೇಡಿಕೆಯಲ್ಲಿ ಪರಿಸರ ಬಳಕೆಗೆ ನೀರು ಹಂಚಿಲ್ಲ. ಪರಿಸರಕ್ಕೆ ನೀರು ನೀಡುವುದು ಕೇವಲ ಗೋವಾದ ಬಾಧ್ಯತೆಯಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೂಡ ಪರಿಸರಕ್ಕೆಂದು ನೀರು ನೀಡಬೇಕು. ಸಮುದ್ರಕ್ಕೆ ನೀರು ಸೇರುವುದು ನೈಸರ್ಗಿಕ ಪ್ರಕ್ರಿಯೆ ಎಂದು ವಕೀಲ ಆತ್ಮರಾಮ್ ನಾಡಕರ್ಣಿ ವಾದಿಸಿದ್ದರು.
ಗೋವಾದ ವಾದವನ್ನು ಬೆಂಬಲಿಸಿದ ಮಹಾರಾಷ್ಟ್ರ:
ರಾಜ್ಯಗಳ ನೈಜ ಅಗತ್ಯವನ್ನು ನ್ಯಾಯಾಧಿಕರಣ ನಿರ್ಧರಿಸಬೇಕು. ಕೊಳ್ಳದೊಳಗಿನ ಬೇಡಿಕೆಗೆ ಒತ್ತು ನೀಡಬೇಕು. ಕೃಷ್ಣಾ ನದಿ ನೀರಿನಲ್ಲಿ ಕೃಷ್ಣಾ ನ್ಯಾಯಾಧಿಕರಣ ರಚನೆ ಆಗುವ ಮುಂಚಿತವಾಗಿ ಅಂಧ್ರಪ್ರದೇಶ 750 ಟಿಎಂಸಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರಣ ನೀಡಿ ಅದನ್ನು ರಕ್ಷಿಸಲಾಗಿತ್ತು. ಈ ಪ್ರಕರಣದಲ್ಲಿಯೂ ಪ್ರಸ್ತುತ ಬಳಕೆಯನ್ನು ರಕ್ಷಿಸಬೇಕು. ನ್ಯಾಯಾಧಿಕರಣವು ಈ ಪ್ರಕರಣದಲ್ಲಿ ಅಡಕವಾಗಿರುವ ಎಲ್ಲ (ಪರಿಸರ, ಅಂತರ್ ಕೊಳ್ಳ) ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಬೇಕು. ಪರಿಸರದ ಅಗತ್ಯಗಳನ್ನು ಗಮನಿಸಬೇಕು. ಗೋವಾ ಮಹದಾಯಿಯನ್ನು ಕರ್ನಾಟಕ ನದಿ ಪಾತ್ರದ ಹೊರಗೆ ಕೊಂಡೊಯ್ಯುತ್ತದೆ ಎಂಬ ಆತಂಕದಿಂದ ಅದು ದೂರು ಸಲ್ಲಿಸಿದೆ. ಗೋವಾವು ಪೂರ್ವಗ್ರಹದಿಂದ ದೂರು ಸಲ್ಲಿಸಿದೆ ಎಂಬುದು ಸರಿಯಲ್ಲ ಎಂದು ಮಹರಾಷ್ಟ್ರ ಪರ ವಕೀಲ ನಾಗೋಲ್ಕರ್ ವಾದ ಮಂಡಿಸಿದರು. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ
https://www.youtube.com/watch?v=Pen28gCcuho