ಬೆಂಗಳೂರು: ಆಗಸ್ಟ್ ನಲ್ಲಿ ಮಹದಾಯಿ ಕುರಿತಂತೆ ನ್ಯಾಯಮಂಡಳಿ ತೀರ್ಪು ಬರಲಿದೆ. ಮಹದಾಯಿ ವಿಚಾರದಲ್ಲಿ ಗೋವಾ ನ್ಯಾಯಾಧಿಕರಣದ ಮುಂದೆ ದೃಢವಾದ ಸಾಕ್ಷ್ಯಾಧಾರಗಳನ್ನ ಒದಗಿಸಿದೆ ಎಂದು ಗೋವಾ ಪರವಾಗಿ ವಾದ ಮಾಡುತ್ತಿರುವ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಡಕರ್ಣಿ, ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರವೇ ಗಟ್ಟಿ ಇದೆ. ಗೋವಾ ವಕೀಲರ ತಂಡ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ಮಾಡ್ತಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ನಮಗೆ ಮಹದಾಯಿ ನದಿ ಗೋವಾದಲ್ಲಿ ಹರಿಯಬೇಕು ಎಂದು ಹೇಳಿದ್ದಾರೆ.
Advertisement
ಮಹದಾಯಿ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಎಲ್ಲಾ ಸಾಕ್ಷಿ, ಪುರಾವೆಗಳ ಪರಿಶೀಲನೆ ಮುಗಿದಿದೆ. ಒಂದೆರಡು ಸಾಕ್ಷ್ಯಾಧಾರಗಳ ಪರಿಶೀಲನೆಗೆ ಕರ್ನಾಟಕಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಜನವರಿ 15ರೊಳಗೆ ಅವರು ಫೈಲ್ ಮಾಡಬೇಕು. ಇಲ್ಲವಾದಲ್ಲಿ ಫೆಬ್ರವರಿ 6ರಿಂದ ವಾದ ಶುರುವಾಗುತ್ತದೆ. ನಾವು ನಮ್ಮ ಪ್ರತಿವಾದವನ್ನು ಜನವರಿ 15ರೊಳಗೆ ಫೈಲ್ ಮಾಡಬೇಕು. ಫೆಬ್ರವರಿ 6ರಿಂದ ನಾನು ನನ್ನ ವಾದ ಶುರು ಮಾಡುತ್ತೇನೆ. ವಾದ ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತೇನೆ. ಫೆಬ್ರವರಿಯಲ್ಲಿ ನಾನು, ಮಾರ್ಚ್‍ನಲ್ಲಿ ಕರ್ನಾಟಕ, ಏಪ್ರಿಲ್‍ನಲ್ಲಿ ಕೆಲವು ದಿನಗಳನ್ನ ಮಹಾರಾಷ್ಟ್ರ ತೆಗೆದುಕೊಳ್ಳುತ್ತದೆ. ಅಗತ್ಯ ಇದ್ದರೆ ಅವರ ವಾದದ ಆಧಾರದ ಮೇಲೆ ನಾನು ಕೆಲವು ದಿನ ಮತ್ತೆ ಸೇರ್ಪಡೆಯಾಗ್ತೀನಿ. ಅಲ್ಲಿಗೆ ಮುಗಿಯುತ್ತದೆ. ಜೂನ್-ಜುಲೈ ವೇಳೆಗೆ ನ್ಯಾಯಾಧಿಕರಣದಿಂದ ತೀರ್ಪು ಬರುತ್ತದೆ. ಆಗಸ್ಟ್ 2018ರ ವೇಳೆಗೆ ನ್ಯಾಯಾಧಿಕರಣದ ಅವಧಿ ಕೂಡ ಮುಕ್ತಾಯವಾಗುತ್ತದೆ. ಅದಕ್ಕೂ ಮುನ್ನ ಅವರು ತೀರ್ಪು ಪ್ರಕಟಿಸಬೇಕು ಎಂದು ನಾಡಕರ್ಣಿ ತಿಳಿಸಿದ್ರು.
Advertisement
Advertisement
ಯಡಿಯೂರಪ್ಪರನ್ನ ನಂಬಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ನ್ಯಾಯಾಧಿಕರಣದ ಮುಂದೆ ನನಗೆ ಕರ್ನಾಟಕ ವಿರೋಧಿ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಕರ್ನಾಟಕ ಹಾಗೂ ಕರ್ನಾಟಕದ ಯಾರನ್ನೂ ನಂಬುವುದಿಲ್ಲ. ಯಾಕಂದ್ರೆ ಟ್ರಿಬ್ಯುನಲ್ ತೀರ್ಪು, ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ಕರ್ನಾಟಕ ಸುಗ್ರೀವಾಜ್ಞೆಗಳನ್ನ ತಂದಿರುವ ಇತಿಹಾಸವಿದೆ. ಆದ್ದರಿಂದ ನಾನು ಕರ್ನಾಟಕವನ್ನು ನಂಬಲು ಸಿದ್ಧವಿಲ್ಲ ಎಂದು ಹೇಳಿದ್ರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರ ಬರೆದಿದ್ದು ರಾಜಕೀಯ ಪರಿಹಾರಕ್ಕಷ್ಟೇ. ಯಡಿಯೂರಪ್ಪಗೆ ಬರೆದ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಅಂದ್ರು.
Advertisement
ಕುಡಿಯುವ ನೀರಿನ ಬೇಡಿಕೆಗೆ ಯಾರಿಂದಲೂ ವಿರೋಧ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಕರ್ನಾಟಕ 7.5 ಟಿಎಂಸಿ ನೀರು ಕೇಳ್ತಿದೆ. ಆದ್ರೆ ಅವರಿಗೆ ನಿರ್ದಿಷ್ಟವಾಗಿ ಎಷ್ಟು ಪ್ರಮಾಣದ ನೀರು ಅಗತ್ಯವಿದೆ? ಎಂಬ ಪ್ರಶ್ನೆಗೆ ಉತ್ತರಿಸಿ, ಜಲಾನಯನ ಪ್ರದೇಶದ ಬಳಕೆಯನ್ನ ಪರಿಗಣಿಸಿದ್ರೆ(ಹುಬ್ಬಳ್ಳಿ ಧಾರವಾಡ ಅಲ್ಲ) ಬೆಳಗಾವಿ, ಖಾನಪುರ, ಹುಬ್ಬಳಿ ಪ್ರದೇಶಕ್ಕೆ ಎಷ್ಟು ಕುಡಿಯುವ ನೀರು ಬೇಕೋ ಅದನ್ನು ಅವರು ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಅದನ್ನು ನಾವು ಹೇಳಿದ್ದೇವೆ. ನಾವು ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೋರಾಟಗಾರರಂತೆ ಹೇಳಲು ಸಾಧ್ಯವಿಲ್ಲ. ಬೆಳಗಾವಿ ಖಾನಾಪುರ ಜನರಿಗೆ 0.1 ಟಿಎಂಸಿ ನೀರು ಬಿಟ್ಟರೆ ಸಾಕು ಎಂದು ಹೇಳಿದ್ರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋವಾ ಪರ ವಕೀಲಿ ಮಾಡಬಹುದೇ?: ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಆಯ್ಕೆಯಾಗುವ ವಕೀಲರು ಖಾಸಗಿ ಮೊಕದ್ದಮೆಗಳ ವಕೀಲಿ ಕೈಗೊಳ್ಳುವಂತಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯ ಮೊಕದ್ದಮೆಗಳ ವಿನಃ ರಾಜ್ಯ ಸರ್ಕಾರಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪರ ವಕಾಲತ್ತು ಮಾಡಲು ಕೇಂದ್ರದ ಅನುಮತಿ ಪಡೆಯಬೇಕು. ಹೀಗಿರುವಾಗ ಎರಡೂ ರಾಜ್ಯಗಳ ನಡುವೆ ತಟಸ್ಥ ಧೋರಣೆ ಅನುಸರಿಸಬೇಕಾದ ಕೇಂದ್ರ ಸರ್ಕಾರ ಆತ್ಮಾರಾಮ ನಾಡಕರ್ಣಿ ಅವರಿಗೆ ಗೋವಾದ ಪರ ವಾದ ಮಾಡಲು ಅನುಮತಿ ನೀಡಿದ್ದು ಸರಿಯೇ ಎನ್ನುವ ಪ್ರಶ್ನೆ ಈ ಹಿಂದೆ ಎದ್ದಿತ್ತು. ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ನಾಡಕರ್ಣಿ ಗೋವಾದ ಅಡ್ವೊಕೇಟ್ ಜನರಲ್ ಆಗಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಪ್ತರು ಕೂಡ ಆಗಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಾಡಕರ್ಣಿ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‍ಗಳಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ