ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಮಾಡಲು ಕಳಸಾ ಬಂಡೂರಿ ಮಹದಾಯಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
ಕಳಸಾ ಬಂಡೂರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ಶುಕ್ರವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಇತ್ಯರ್ಥ ಪಡಿಸುವ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಗಳು ಮಾತು ತಪ್ಪಿವೆ ಎಂದು ಆರೋಪಿಸಿದರು.
ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಈ ವೇಳೆ ಮಹದಾಯಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಎಪಿಎಂಸಿ ವರ್ತಕರು ಬೆಂಬಲ ನೀಡಿದ್ದಾರೆ.
ಮಹದಾಯಿ ವಿವಾದವನ್ನು ಬಗೆ ಹರಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ, ವಿವಾದಿತ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಬೇಕು. ಇದನ್ನು ಬಿಟ್ಟು ಪೊಳ್ಳು ಭರವಸೆ ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕ್ರಮವನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪ್ರತಿಭಟನಾನಿರತು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ
ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಳ್ಳುವದನ್ನು ಬಿಡಬೇಕು. ಬಿಜೆಪಿ ನಾಯಕರಿಗೆ ನಿಜವಾಗಲೂ ಈ ಭಾಗದ ಜನರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಧ್ಯಪ್ರವೇಶ ಮಾಡಲು ಒತ್ತಾಯಿಸಬೇಕು ಎಂದು ಅಗ್ರಹಿಸಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?
ಬಂದ್ ಗೆ ಕರೆ ನೀಡಿದ್ದರಿಂದ ಕಳಸಾ ಹೋರಾಟ ತೀವ್ರವಾಗಿರುವ ಗದಗ್, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.
https://www.youtube.com/watch?v=_JWv-dVmm8E