ಧಾರವಾಡ: ಮಹಾದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಪರಿಸರ ಇಲಾಖೆಯಿಂದ ಕಳಸಾ ಬಂಡೂರಿ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮವನ್ನು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು, ಸಂಘ ಸಂಸ್ಥೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಕಳಸಾ ಬಂಡೂರಿಗೆ ಅನುಮತಿ ನೀಡಿ ನಂತರ ವಾಪಸ್ ಪಡೆಯಲು ನೀಡಿರುವ ಕಾರಣ ಸೂಕ್ತವಾಗಿಲ್ಲ. ಏಕೆಂದರೆ ಅನುಮತಿ ಕೊಡುವಾಗ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿರುವ ಕುರಿತು ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಈಗ ಅನುಮತಿ ಹಿಂಪಡೆಯಲು ನೀಡಿದ ಕಾರಣ ನೋಡಿದರೆ ನಮಗೆ ಮೋಸವಾಗುತ್ತಿದೆ ಎಂದು ಅನ್ನಿಸುತ್ತಿದೆ. 2002ರಲ್ಲಿ ವಾಜಪೇಯಿ ಕಾಲದಲ್ಲಿಯೂ ಹೀಗೆ ಮಾಡಿದ್ದರು. ಅನುಮತಿ ಕೊಟ್ಟ ನಾಲ್ಕು ತಿಂಗಳ ಬಳಿಕ ಗೋವಾ ಸರ್ಕಾರದ ಕಾರಣ ನೀಡಿ ವಾಪಸ್ ಪಡೆದಿದ್ದರು. ಇದರಿಂದಾಗಿ 17 ವರ್ಷ ತಡವಾಗಿದೆ, ಈಗ ಮತ್ತೆ ಅನುಮತಿ ಕೊಟ್ಟು ವಾಪಸ್ ಪಡೆದಿದ್ದೀರಿ. ಹಾಗಾದರೆ ಇದಕ್ಕೆ ಇನ್ನು ಎಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.