ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿರುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಮಹಾಕುಂಭ ಮೇಳ ಜರುಗಲಿದೆ. ಈ ಕುಂಭಮೇಳಕ್ಕೆ ದೇಶದ ಹಲವು ಸಾಧು-ಸಂತರ ಆಗಮಿಸಲಿದ್ದು, ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಹೌದು. ನಾಳೆಯಿಂದ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮಹಾಕುಂಭ ಮೇಳ (Maha kumbamela) ಜರುಗಲಿದೆ. ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ 4 ದಿನಗಳ ಕಾಲ ಸಂಭ್ರಮ ಮನೆ ಮಾಡಲಿದೆ. ಈ ಅಂಬಿಗರ ಹಳ್ಳಿಯ ಸಂಗಮ ಕ್ಷೇತ್ರಕ್ಕೆ ಒಂದು ಇತಿಹಾಸವೇ ಇದೆ. ಬಾಲ್ಯದಲ್ಲಿ ಮಲೆ ಮಹದೇಶ್ವರರು ನಡೆಸಿದ ಪವಾಡವನ್ನ ಜನ ಇಂದಿಗೂ ಮರೆತಿಲ್ಲ. ಹೀಗಾಗಿ ಈ ಒಂದು ಸ್ವಕ್ಷೇತ್ರದಲ್ಲಿ ಮಹಾಮೇಳ ನಡೀತಿದೆ. ಮಂಡ್ಯ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇದನ್ನೂ ಓದಿ: ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
ಈ ಮಹಾಕುಂಭಮೇಳ ಸುತ್ತೂರು ಶ್ರೀ, ಆದಿಚುಂಚನಗಿರಿಯ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha swamiji) ದಿವ್ಯಸಾನಿಧ್ಯದಲ್ಲಿ ಜರುಗಲಿದೆ. ಈ ಸಂಭ್ರಮದಲ್ಲಿ ಸಿಎಂ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಸೇರಿದಂತೆ ಬಿಜೆಪಿ (BJP)ಯ ಹಲವು ನಾಯಕರು ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲ ಅಕ್ಟೋಬರ್ 16ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸೇರಿದಂತೆ ದೇಶದ ಹಲವು ಸಾಧು-ಸಂತರು, ಮಠಾಧಿಪತಿಗಳು, ನಾಗಸಾಧುಗಳು ಮಹಾಮೇಳಕ್ಕೆ ಸಾಕ್ಷಿಯಾಗಲಿದ್ದಾರೆ.
ಇವತ್ತು ಸ್ಥಳಕ್ಕೆ ಸಚಿವ ನಾರಾಯಣಗೌಡ (Narayana Gowda) ಭೇಟಿ ನೀಡಿ ಮಹಾಮೇಳದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಅತ್ತ ಸುತ್ತೂರು ಶ್ರೀಗಳು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಹಾಮೇಳದ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ
ಒಟ್ಟಾರೆ ಪವಾಡ ಪುರುಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಕುಂಭ ಮೇಳದ ಕಲರವ ಮನೆ ಮಾಡಲಿದೆ.