ಮಡಿಕೇರಿ: ಕಾರು ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಹೊಡೆದು ಸವಾರ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದಲ್ಲಿ ನಡೆದಿದೆ.
ಮುಳ್ಳುಸೋಗೆಯ ಅಂಬೇಡ್ಕರ್ ಕಾಲೊನಿಯ ನಿವಾಸಿ ಅಜೇಯ್ (22) ಮೃತ ದುರ್ದೈವಿ. ಕುಶಾಲನಗರ ಸಮೀಪದ ಕೂಡ್ಲೂರು ರಾಜ್ಯ ಹೆದ್ದಾರಿ ಸಮೀಪದಲ್ಲಿ ಅಪಘಾತ ಸಂಭವಿಸಿದ್ದು, ಸ್ಕೂಟಿ ಪೀಸ್ ಪೀಸ್ ಆಗಿತ್ತು.
ಮೃತ ಅಜೇಯ್ ಕುಶಾಲನಗರದ ಖಾಸಗಿ ಲಾಡ್ಜ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಗುರುವಾರ ಕೆಲಸದ ನಿಮಿತ್ತ ಸ್ಕೂಟಿಯಲ್ಲಿ ಕುಶಾಲನಗರದಿಂದ ಕೂಡ್ಲೂರಿಗೆ ತೆರಳುತ್ತಿದ್ದರು. ಇತ್ತ ಪಿರಿಯಾಪಟ್ಟಣದ ನಿವಾಸಿ ರಮೇಶ್ ಕೆಎ 12 ಬಿ 0048 ನಂಬರಿನ ಇಂಡಿಕಾ ಕಾರಿನಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿದ್ದರು. ಕೂಡ್ಲೂರು ರಾಜ್ಯ ಹೆದ್ದಾರಿ ಸಮೀಪದಲ್ಲಿ ನಿಯಂತ್ರಣದ ತಪ್ಪಿದ ಕಾರು ಹಾಗೂ ಬೈಕ್ ಮುಖಾಮುಖಿ ಹೊಡೆದ ಪರಿಣಾಮ ಅಜೇಯ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ದುರ್ಘಟನೆಯಿಂದ ಗಾಬರಿಗೊಂಡ ಚಾಲಕ ರಮೇಶ್ ಅಜೇಯ್‍ನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಅಜೇಯ್ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್‍ಪಿ ಶೈಲೇಂದ್ರ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.