– ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ತಾತ್ವಿಕ ಒಪ್ಪಿಗೆ
ಮಡಿಕೇರಿ: ಇಂದಿಗೂ ರೈಲ್ವೇ ಸಂಪರ್ಕವಿಲ್ಲದ ರಾಜ್ಯದ ಏಕೈಕ ಜಿಲ್ಲೆ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಸಮಯ ಬಂದಿದೆ.
ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ ಪ್ರವಾಸೋದ್ಯಮ, ಕಾಫಿ ಹಾಗೂ ಕಾಳುಮೆಣಸು ಬೆಳೆ. ಈ ಎರಡರ ಅಭಿವೃದ್ಧಿಗೆ ಸಾರಿಗೆ ಬಹುಮುಖ್ಯ. ಹಲವು ವರ್ಷಗಳಿಂದಲೂ ಜಿಲ್ಲೆಗೆ ರೈಲ್ವೇ ಸಂಪರ್ಕ ಕಲ್ಪಿಸುವುದಕ್ಕೆ ಶತಪ್ರಯತ್ನ ನಡೆಯುತ್ತಲೇ ಇದೆ. ಜೊತೆಗೆ ವಿಮಾನ ನಿಲ್ದಾಣಕ್ಕೂ ಕಳೆದ ಹತ್ತು ವರ್ಷಗಳಿಂದಲೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿರಲಿಲ್ಲ.
Advertisement
Advertisement
ಒಂದೆಡೆ ರೈಲ್ವೇ ಸಂಪರ್ಕಕ್ಕೆ ಒಪ್ಪಿಗೆ ದೊರೆಯುತ್ತಿದ್ದರೆ, ಮತ್ತೊಂದೆಡೆ ಮಿನಿ ವಿಮಾನ ನಿಲ್ದಾಣಕ್ಕೂ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯಲ್ಲಿರುವ ಕೃಷಿ ಇಲಾಖೆಯ ಕೃಷಿ ಫಾರಂ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಈ ಜಾಗದಲ್ಲಿ ವಿಮಾನ ನಿಲ್ದಾಣ ಸಾಧ್ಯವಿದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ.
Advertisement
ಈ ಹಿಂದೆಯೂ ವಿಮಾನ ನಿಲ್ದಾನಕ್ಕೆ ಮಾದಾಪುರ, ಹೆಬ್ಬಾಲೆ ಸೇರಿದಂತೆ ವಿವಿಧ ಸ್ಥಳಗಳನ್ನು ತೋರಿಸಲಾಗಿತ್ತು. ಆದರೆ ಆ ಸ್ಥಳಗಳು ಸೂಕ್ತವಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳಿಂದ ಒಪ್ಪಿಗೆ ದೊರೆತಿರಲಿಲ್ಲ. ಇದೀಗ ಕೂಡಿಗೆಯಲ್ಲಿರುವ 65 ಎಕರೆ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಿದೆ. ರನ್ ವೇ ನಿರ್ಮಾಣ ಮಾಡಲು ಬೇಕಾಗಿರುವ 900 ಮೀಟರ್ ಜಾಗವೂ ಇಲ್ಲಿ ಸೂಕ್ತವಾಗಿದೆ ಎಂದು ಏರ್‌ಪೋರ್ಟ್ ಆಫ್ ಅಥಾರಿಟಿ ಅಧಿಕಾರಿಗಳು ವರದಿ ನೀಡಿದ್ದಾರೆ. ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ದೊರೆಯುತ್ತಿರುವುದು ಜನರಿಗೆ ಸಂತಸ ತಂದಿದೆ. ಜೊತೆಗೆ ಇದರಿಂದ ಜಿಲ್ಲೆ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.