ಮಡಿಕೇರಿ: ಮಗಳನ್ನ ರಾಣಿಯಂತೆ ಮುದ್ದಾಗಿ ಸಾಕಿದ್ದ ತಂದೆ ಪುತ್ರಿ ಮದುವೆಯ ಕ್ಷಣವನ್ನು ಕಣ್ತುಂಬಿಕೊಳ್ಳಬೇಕು ಅಂತ ಕನಸು ಕಂಡಿದ್ದರು. ಮಗಳ ಮದುವೆಗೆ ಇನ್ನೇನು ಕೆಲವೇ ಗಂಟೆ ಇರುವಾಗಲೇ ಅಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಕುಟುಂಬಸ್ಥರು ಸಾವಿನ ಸುದ್ದಿ ಬಚ್ಚಿಟ್ಟು ಮದುವೆ ಮಾಡಿದ್ದಾರೆ.
ಮಡಿಕೇರಿಯ ಚಾಮುಂಡೇಶ್ವರಿ ನಗರ ನಿವಾಸಿ ವಿ.ಕೆ ದಾಮೋದರ್ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಮಗಳ ಮದುವೆ ನಿಶ್ಚಯ ಮಾಡಿದ್ದರು. ಮೈಸೂರಿನ ವಿಷ್ಣುವರ್ದನ್ ಎಂಬವರ ಜೊತೆ ಮಗಳು ಹರ್ಷಿತಾಗೆ ನವೆಂಬರ್ 3ಕ್ಕೆ ಮದ್ವೆ ನಿಶ್ಚಯ ಮಾಡಿದ್ದರು. ಅದರಂತೆ ವಧು-ವರನ ಕುಟುಂಬಸ್ಥರು ನವೆಂಬರ್ 2ರಂದು ಬೆಳಗ್ಗೆ ಮಡಿಕೇರಿಯಿಂದ ತಿರುಪತಿಗೆ ತೆರಳಿ, ರಾತ್ರಿ ಅಲ್ಲೇ ರೂಂ ಮಾಡಿ ವಾಸ್ತವ್ಯ ಹೂಡಿ, ಮದುವೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ನವೆಂಬರ್ 3ರ ಬೆಳಗ್ಗೆ 8.30ಕ್ಕೆ ತಿಮ್ಮಪ್ಪನ ಸನ್ನಿಧಿಯಲ್ಲಿ ತಾಳಿ ಕಟ್ಟುವ ಶುಭ ಸಮಯ ನಿಗದಿಯಾಗಿತ್ತು.
Advertisement
Advertisement
ಬೆಳಗಿನ ಜಾವ 2 ಗಂಟೆಗೆ ದಾಮೋದರ್‌ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಸಂಬಂಧಿಕರು ಅವರನ್ನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ದಾಮೋದರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಗಳ ಮದುವೆಯೇ ತಂದೆಯ ಕೊನೆ ಆಸೆಯಾಗಿತ್ತು ಅನ್ನೋದನ್ನು ತಿಳಿದಿದ್ದ ಸಂಬಂಧಿಕರು ಅಂತ ತಂದೆ ಸಾವಿನ ಸುದ್ದಿಯನ್ನು ಮಗಳಿಗೆ ಹೇಳದೇ ಮದುವೆ ಮಾಡಿಸಿದ್ದಾರೆ. ಪದೇ ಪದೇ ಅಪ್ಪ ಎಲ್ಲಿ ಎಂದು ಹರ್ಷಿತಾ ಕೇಳಿದ್ದಕ್ಕೆ ಬೇರೆ ನೆಪ ಹೇಳಿ ತಾಳಿ ಕಟ್ಟಿಸಿದ್ದಾರೆ. ಮದುವೆಯೆಲ್ಲಾ ಮುಗಿದು ವಾಪಸ್ ಹೊರಡುವ ವೇಳೆ ಹರ್ಷಿತಾಗೆ ಅಪ್ಪ ಮೃತಪಟ್ಟಿರುವುದು ಗೊತ್ತಾಗಿದೆ.
Advertisement
Advertisement
ಮದುವೆ ಖುಷಿಯಲ್ಲಿದ್ದ ಹರ್ಷಿತಾಗೆ ಅಪ್ಪ ಇನ್ನಿಲ್ಲ ಎಂಬ ವಿಷಯ ತಿಳಿದು ದುಃಖದ ಕಟ್ಟೆ ಒಡೆದಿದೆ. ನಂತರ ತಿರುಪತಿಯಿಂದ ಮೃತದೇಹವನ್ನು ಮಡಿಕೇರಿಯ ನಿವಾಸಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಗಿದೆ. ಜೀವಕ್ಕೆ ಜೀವವಾಗಿದ್ದ ಅಪ್ಪನನ್ನ ಕಳೆದುಕೊಂಡ ಮಗಳು ಕಣ್ಣೀರಿನ ಜೊತೆಯೇ ಪತಿ ಮನೆಯ ಹೊಸ್ತಿಲು ತುಳಿದು, ನಂತರ ಅಪ್ಪನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಈ ಮನಕಲಕುವ ಘಟನೆಗೆ ಸ್ಥಳೀಯರೆಲ್ಲರೂ ಮರುಗಿದ್ದು, ಇಡೀ ಊರೇ ಕಣ್ಣೀರು ಮಿಡಿದಿದೆ.