ಕೊಡಗು: ಆರೆಂಜ್ ಅಲರ್ಟ್‍ನಲ್ಲಿರೋ ಕೊಡಗಿನ ವಿವಿಧೆಡೆ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯ ಪರಿಣಾಮ ಮಲೆತಿರಕೆ ಬೆಟ್ಟದ ಸಮೀಪ ಇರುವ ಎರಡು ಮನೆಗಳ ಮೇಲೆ ಮಣ್ಣು ಕುಸಿದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ರಾಮದ ಪುಪ್ಪರಾಜ್ ಮತ್ತು ದಿನೇಶ್ ಎಂಬವರ ಮನೆಗಳಿಗೆ ತೀವ್ರವಾಗಿ ಹಾನಿಯಾಗಿದೆ. ಮನೆಯಲ್ಲಿ ಇದ್ದವರನ್ನು ಸನೀಹದ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಕಾಡುತ್ತಿದೆ.
ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆಯಾಗುತ್ತಿದೆ. ಕೊಡಗಿನಲ್ಲಿ ವಾಡಿಕೆ ಮಳೆಯಾಗದಿದ್ದರೂ ಕಳೆದ ಬಾರಿ ಭೂ ಕುಸಿತ ಉಂಟಾಗಿದ್ದ ಸ್ಥಳಗಳಲ್ಲಿ ಕುಸಿಯುತ್ತಿರೋ ಸಣ್ಣ ಪ್ರಮಾಣದ ಮಣ್ಣು ಆತಂಕ ಸೃಷ್ಟಿಸಿದೆ.
ಒಟ್ಟಿನಲ್ಲಿ ಹೀಗೇ ಮಳೆ ಹೆಚ್ಚಾದಲ್ಲಿ ಮತ್ತೆ ಯಾವ ಅನಾಹುತ ಎದುರಸಬೇಕಾಗುತ್ತೋ ಅನ್ನೋ ಭಯದಲ್ಲೇ ಜಿಲ್ಲೆಯ ಜನ ದಿನದೂಡುವಂತಾಗಿರೋದಂತು ಸತ್ಯ.