ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿವೆ. ಈಗಾಗಲೇ ಎಲ್ಲ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯತಂತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ವರ್ಸಸ್ ಮಧು ಬಂಗಾರಪ್ಪ ನಡುವೆ ಅಖಾಡ ಆರಂಭವಾಗಲಿದೆ.
ಬಿಎಸ್‍ವೈ ಸೂಚನೆಯಂತೆ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಸೊರಬ ಕ್ಷೇತ್ರದ ಶಾಸಕರಾಗಿರುವ ಸಹೋದರ ಮಧು ಬಂಗಾರಪ್ಪ ಕೂಡ ಜೆಡಿಎಸ್ ನಿಂದ ಚುನವಾಣಾ ಕಣಕ್ಕೆ ಇಳಿಯಲಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಕುಮಾರ್ ಬಂಗಾರಪ್ಪರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡಿದ್ರೆ ಸಹೋದರರ ಮಧ್ಯೆ ವಾರ್ ನಡೆಯಲಿದೆ.
ಸೊರಬ ಕ್ಷೇತ್ರದಿಂದಲೇ ಕುಮಾರ್ ಬಂಗಾರಪ್ಪ ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಮಾತ್ರ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ಸ್ನೇಹಿತರ ಸವಾಲ್: ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನ ಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.
ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.