ಬರ್ಲಿನ್: ಲುಫ್ಥಾನ್ಸಾ(Lufthansa) ಸಂಸ್ಥೆಯ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್ (ನೋಸ್ ಗೇರ್) ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜರ್ಮನಿಯ (Germany) ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ(Frankfurt Airport) ನಡೆದಿದೆ.
ವಿಮಾನ ನಿಲ್ದಾಣದ ಗೇಟ್ A15 ರಲ್ಲಿ ಗುರುವಾರ ಜರ್ಮನಿ ಕಾಲಮಾನ ಮಧ್ಯಾಹ್ನ 12:45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆ ನಡೆದಾಗ ಪ್ರಯಾಣಿಕರು ಇನ್ನೂ ವಿಮಾನವನ್ನು ಹತ್ತಿರಲಿಲ್ಲ. ಆದರೆ ವಿಮಾನದ ಒಳಗಿದ್ದ ಇಬ್ಬರು ಕ್ಯಾಬಿನ್ ಸಿಬ್ಬಂದಿ ಮತ್ತು ಇಬ್ಬರು ಗ್ರೌಂಡ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನ ನೌಕರರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿಮಾನವು ಫ್ರಾಂಕ್‌ಫರ್ಟ್‌ನಿಂದ ಅಮೆರಿಕದ ಲಾಸ್ ಏಂಜಲೀಸ್‌ಗೆ ಹೊರಡಲು ಸಿದ್ಧವಾಗುತ್ತಿತ್ತು. ಅಪಘಾತದ ಬಳಿಕ ಈ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಅಪಘಾತಕ್ಕೀಡಾದ ವಿಮಾನವು ಕೇವಲ ಒಂದು ವರ್ಷ ಹಳೆಯದಾದ, ಹೊಚ್ಚಹೊಸ ಬೋಯಿಂಗ್ 787-9 (D-ABPQ) ಆಗಿದ್ದು, ಇದು ಫೆಬ್ರವರಿ 2026 ರಲ್ಲಷ್ಟೇ ಸೇವೆಗೆ ಸೇರ್ಪಡೆಯಾಗಿತ್ತು.
A nearly five-month-old Lufthansa Boeing 787-9 Dreamliner at Frankfurt, preparing for a flight to Los Angeles, experienced a nose landing gear collapse at the gate. pic.twitter.com/72b6J4HyIr
— Aviation (@xAviation) June 4, 2026
ವಿಮಾನವು ನಿಂತ ಜಾಗದಲ್ಲೇ ಅದರ ಮುಂಭಾಗದ ಚಕ್ರಗಳು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ, ವಿಮಾನದ ಮೂಗಿನ ಭಾಗವು ರನ್‌ವೇ (ಟಾರ್ಮ್ಯಾಕ್) ನೆಲಕ್ಕೆ ಅಪ್ಪಳಿಸಿದೆ.ಇಷ್ಟು ಹೊಸ ವಿಮಾನದಲ್ಲಿ ಇಂತಹ ತಾಂತ್ರಿಕ ದೋಷ ಕಂಡುಬಂದಿರುವುದು ವಾಯುಯಾನ ತಜ್ಞರಲ್ಲಿ ಆಶ್ಚರ್ಯ ಮೂಡಿಸಿದೆ.
ಲುಫ್ಥಾನ್ಸಾ ಸಂಸ್ಥೆ ಮತ್ತು ಜರ್ಮನಿಯ ವಾಯುಯಾನ ಅಧಿಕಾರಿಗಳು ಇದು ಮಾನವ ಸಹಜ ತಪ್ಪೇ, ಯಾಂತ್ರಿಕ ದೋಷವೇ ಅಥವಾ ಸಾಫ್ಟ್‌ವೇರ್ ಸಮಸ್ಯೆಯೇ ಎಂಬ ಬಗ್ಗೆ ಜಂಟಿ ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ 2021 ರಲ್ಲಿ ಬ್ರಿಟಿಷ್ ಏರ್ವೇಸ್‌ನ ಬೋಯಿಂಗ್ 787 ವಿಮಾನದಲ್ಲೂ ಇದೇ ರೀತಿಯ ನೋಸ್ ಗೇರ್ ಕುಸಿತ ಉಂಟಾಗಿತ್ತು. ಅಂದು ತಂತ್ರಜ್ಞರು ಸುರಕ್ಷತಾ ಪಿನ್ ಅನ್ನು ತಪ್ಪು ರಂಧ್ರದಲ್ಲಿ ಹಾಕಿದ್ದರಿಂದ ಆ ಅಪಘಾತ ನಡೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು. ಪ್ರಸ್ತುತ ಘಟನೆಗೂ ಅದಕ್ಕೂ ಹೋಲಿಕೆ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ.
