ನವದೆಹಲಿ: 70ನೇ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪುರುಷರು ಇರುವ ದಳದ ಸಾರಥ್ಯ ವಹಿಸಲಿದ್ದಾರೆ. ರಾಜಪಥ ಮಾರ್ಗದಲ್ಲಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಅವರ ನೇತೃತ್ವದ 144 ಯೋಧರು ಪರೇಡ್ ನಡೆಸಲಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ಭಾರತೀಯ ಸೇನೆ ಸೇರಿದ್ದ ಹೈದರಾಬಾದ್‍ನ ಯುವ ಅಧಿಕಾರಿ ಭಾವನಾ ಕಸ್ತೂರಿ ತಮ್ಮ ದಳದೊಂದಿಗೆ ಮೈಕೊರೆಯುವ ಚಳಿಯಲ್ಲಿ ಮುಂಜಾನೆ 5.30ಕ್ಕೆ ತಾಲೀಮು ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ.
9 ವರ್ಷ ಹಿಂದೆ ಎನ್‍ಸಿಸಿ ತಂಡದ ಸದಸ್ಯೆಯಾಗಿ ಪರೇಡ್‍ನಲ್ಲಿ ಹೆಜ್ಜೆ ಹಾಕಿದ್ದ ಭಾವನಾ ಅವರು ಗಣರಾಜ್ಯೋತ್ಸವ ಪರೇಡ್‍ನಲ್ಲಿ ತಾನು ಸೇನಾ ತಂಡವೊಂದನ್ನು ಮುನ್ನಡೆಸಲಿರುವ ಕುರಿತು ಸಂತಸಗೊಂಡಿದ್ದಾರೆ.
ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿಯವರ ಮುಂದೆ ನಾನು ತಂಡವನ್ನು ಮುನ್ನಡೆಸಿ ಅವರಿಗೆ ಸೆಲ್ಯೂಟ್ ನೀಡುವುದು ನನ್ನ ಕನಸಿನ ಗಳಿಗೆಯಾಗಿದೆ. ಪರೇಡನ್ನು ವೀಕ್ಷಿಸಲು ಬರುವ ಜನಸ್ತೋಮದ ಕುರಿತು ನಾನು ಪುಳಕಗೊಂಡಿದ್ದೇನೆ. ನನ್ನನ್ನು ನೋಡಿ ಬಹಳಷ್ಟು ಹೆಣ್ಣು ಮಕ್ಕಳು ಖುಷಿ ಪಡಬಹುದು’ಎಂದು ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೇ ಯಾವುದೇ ಪ್ರಶಸ್ತಿಯೂ ಈ ಗೌರವಕ್ಕೆ ಮತ್ತು ನನ್ನ ಮೇಲೆ ಹೊರಿಸಲಾಗಿರುವ ಹೊಣೆಗಾರಿಕೆಗೆ ಸಾಟಿಯಲ್ಲ. ಇದು ನನ್ನ ಜೀವಮಾನದ ಶ್ರೇಷ್ಠ ಪ್ರಶಸ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv