ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ (Rinku Singh), ಹರ್ಷಿತ್ ರಾಣಾ ಸಿಕ್ಸರ್ ಬೌಂಡರಿಗಳ ಹೊಡಿ ಬಡಿ ಆಟದ ಹೊರತಾಗಿಯೂ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ.
ಕೊನೇ ಓವರ್ ಥ್ರಿಲ್ಲರ್
ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯಿ (Ravi Bishnoi) ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1 ರನ್ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಪೇರಿಸಿತು. 239 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್ ಭರ್ಜರಿ ಇನ್ನಿಂಗ್ಸ್ ಕಟ್ಟಿತ್ತು. ಪವರ್ ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡರೂ ಸ್ಫೋಟಕ 90 ರನ್ ಕಲೆಹಾಕಿತ್ತು. ಅಜಿಂಕ್ಯಾ ರಹಾನೆ (Ajinkya Rahane), ಸುನೀಲ್ ನರೇನ್, ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ ಹೆಚ್ಚಿಸುತ್ತಲೇ ಸಾಗಿತು. ಇದರಿಂದ ಕೆಕೆಆರ್ ಸುಲಭ ಜಯ ಸಾಧಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದ್ರೆ 15, 16, 17ನೇ ಓವರ್‌ನಲ್ಲಿ ಒಂದೊಂದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್ ಸಂಕಷ್ಟಕ್ಕೀಡಾಯಿತು.
ಕೆಕೆಆರ್ ಪರ ಅಜಿಂಕ್ಯಾ ರಹಾನೆ 35 ಎಸೆತಗಳಲ್ಲಿ 61 ರನ್ (2 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ಸುನೀಲ್ ನರೇನ್ 13 ಎಸೆತಗಳಲ್ಲಿ 30 ರನ್ (2 ಸಿಕ್ಸರ್, 4 ಬೌಂಡರಿ), ವೆಂಕಟೇಶ್ ಅಯ್ಯರ್ 45 ರನ್ (29 ಎಸೆತ, 6 ಬೌಂಡರಿ 1 ಸಿಕ್ಸರ್) ಬಾರಿಸಿದ್ರು. ಕೊನೆಯಲ್ಲಿ ರಿಂಕು ಸಿಂಗ್ 15 ಎಸೆತಗಳಲ್ಲಿ 38 ರನ್ ಬಾರಿಸಿದ್ರೆ, ಹರ್ಷಿತ್ ರಾಣಾ 9 ಎಸೆತಗಳಲ್ಲಿ 10 ರನ್ ಕೊಡುಗೆ ನೀಡಿದರು.
ಲಕ್ನೋ ಪರ ಆಕಾಶ್ ದೀಪ್, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಿತ್ತರೆ, ಅವೇಶ್ ಖಾನ್, ದಿಗ್ವೇಷ್ ರಾಥಿ, ರವಿ ಬಿಷ್ಣೋಯಿ, ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಕೋಲಸ್ ಪೂರನ್ (Nicholas Pooran) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಿತು. ಬ್ಯಾಟಿಂಗ್ ಸ್ನೇಹಿ ಪಿಚ್ ಲಾಭ ಪಡೆದ ಲಕ್ನೋ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು.
NICHOLAS POORAM AT THE EDEN. 🔥pic.twitter.com/BY8OquXP60
— Mufaddal Vohra (@mufaddal_vohra) April 8, 2025
ಆರಂಭಿಕರಾದ ಏಡನ್ ಮಾರ್ಕ್ರಮ್, ಮಿಚೆಲ್ ಮಾರ್ಷ್ (Mitchell Mar) ಜೋಡಿ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 99 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಏಡನ್ ಮಾರ್ಕ್ರಮ್ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಮಾರ್ಷ್ ಜೊತೆಗೂಡಿ ಪೂರನ್ ಸಹ ಅಬ್ಬರಿಸಲು ಶುರು ಮಾಡಿದರು. 2ನೇ ವಿಕೆಟಿಗೆ ಈ ಜೋಡಿ 30 ಎಸೆತಗಳಲ್ಲಿ 71 ರನ್ ಜೊತೆಯಾಟ ನೀಡಿದ್ರೆ 3ನೇ ವಿಕೆಟ್‌ಗೆ ಅಬ್ದುಲ್ ಸಮದ್ ಹಾಗೂ ಪೂರನ್ ಜೋಡಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ 51 ರನ್ ಗಳ ಜೊತೆಯಾಟ ಪೇರಿಸಿತು. ಇದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ನಿಕೋಲಸ್ ಸಿಡಿಲಬ್ಬರದ ಬ್ಯಾಟಿಂಗ್:
ಪ್ರಸಕ್ತ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ನಿಕೋಲಸ್ ಪೂರನ್ ಪ್ರಸಕ್ತ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 10 ಓವರ್‌ಗಳ ಬಳಿಕ ಕಣಕ್ಕಿಳಿದ ಪೂರನ್ 8 ಭರ್ಜರಿ ಸಿಕ್ಸರ್, 7 ಬೌಂಡರಿಗಳೊಂದಿಗೆ 36 ಎಸೆತಗಳಲ್ಲಿ 87 ರನ್ (241.66 ಸ್ಟ್ರೈಕ್‌ರೇಟ್) ಸಿಡಿಸಿ ಅಜೇಯರಾಗುಳಿದರು. ಇದರೊಂದಿಗೆ ಮಿಚೆಲ್ ಮಾರ್ಷ್ ಸಹ 48 ಎಸೆತಗಳಲ್ಲಿ 81 ರನ್ (5 ಸಿಕ್ಸರ್, 6 ಬೌಂಡರಿ), ಏಡನ್ ಮಾರ್ಕ್ರಮ್ 47 ರನ್ (28 ಎಸೆತ, 2 ಸಿಕ್ಸರ್, 4 ಬೌಂಡರಿ), ಅಬ್ದುಲ್ ಸಮದ್ 6 ರನ್, ಡೇವಿಡ್ ಮಿಲ್ಲರ್ ಅಜೇಯ 4 ರನ್ ಕೊಡುಗೆ ನೀಡಿದರು.
ಕೆಕೆಆರ್ ಪರ ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 51 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರೆ, ಆ್ಯಂಡ್ರೆ ರಸೆಲ್ 2 ಓವರ್‌ಗಳಲ್ಲಿ 32 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.