– ಲಕ್ನೋ ವಿರುದ್ಧ ಚೆನ್ನೈಗೆ 5 ವಿಕೆಟ್‌ಗಳ ಜಯ
ಚೆನ್ನೈ: ಇಲ್ಲಿನ ಎಂ. ಎ. ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳ ಜಯಗಳಿಸಿದೆ. ಮ್ಯಾಚ್ ಟರ್ನಿಂಗ್ ಹಂತದಲ್ಲಿದ್ದಾಗಲೇ ಲಕ್ನೋ 2 ಕ್ಯಾಚ್ ಡ್ರಾಪ್, 2 ವೈಡ್ ಹಾಗೂ 2 ಸಿಕ್ಸರ್ ನೀಡಿ ಸಿಎಸ್‌ಕೆಗೆ ಜಯವನ್ನು ಸುಲಭಗೊಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿ ಜಯಗಳಿಸಿತು. ಇದರೊಂದಿಗೆ, ಅಡಿರುವ 11 ಪಂದ್ಯಗಳಲ್ಲಿ 6ನೇ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಆದರೆ, ಇಷ್ಟೇ ಪಂದ್ಯಗಳಲ್ಲಿ 8ನೇ ಸೋಲು ಅನುಭವಿಸಿದ ಲಕ್ನೋ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು.

ಸಿಎಸ್‌ಕೆ ಪರ, ಉರ್ವಿಲ್ ಪಟೇಲ್ 23 ಎಸೆತಗಳಲ್ಲಿ 8 ಸಿಕ್ಸರ್ 2 ಬೌಂಡರಿ ಸಿಡಿಸಿ 65 ರನ್, ಋತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 42 ರನ್, ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 2 ಸಿಕ್ಸರ್ 3 ಬೌಂಡರಿಗಳ ಸಹಾಯದಿಂದ 28 ರನ್ ಕಲೆಹಾಕಿದರು. ಶಿವಂ ದುಬೆ 7 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 15 ರನ್ ಹಾಗೂ ಪ್ರಶಾಂತ್ ವೀರ್ 12 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 17 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಲಕ್ನೋ ಪರ, ಜೋಶ್ ಇಂಗ್ಲಿಸ್ 33 ಬಾಲ್‌ಗೆ 6 ಸಿಕ್ಸರ್, 10 ಫೋರ್ ಜೊತೆಗೆ 85 ರನ್ ಗಳಿಸಿದರು. ಶೆಹಬಾಜ್ ಅಹ್ಮದ್ 43 ರನ್ ಪೇರಿಸಿದರು. ಉಳಿದಂತೆ ಮಿಚೆಲ್ ಮಾರ್ಷ್ 10, ರಿಷಬ್ ಪಂತ್ 15, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ರನ್ ಗಳಿಸಿದರು.
ಚೆನ್ನೈ ಪರ ಜೇಮೀ ಓವರ್ಟನ್ 3, ಅನ್ಶುಲ್ ಕಾಂಬೋಜ್ 2, ನೂರ್ ಅಹ್ಮದ್ 1 ವಿಕೆಟ್ ಉರುಳಿಸಿದರು.

