ಚಿಕ್ಕಬಳ್ಳಾಪುರ: ಯುವಕನೊಬ್ಬ ವಿಷ ಕುಡಿಸಿ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.
ಕಮಲಾಪುರ ಗ್ರಾಮದ ನಿವಾಸಿ 17 ವರ್ಷದ ಬಾಲಕಿ ಮೃತ ಪ್ರಿಯತಮೆ. ಇದೇ ಗ್ರಾಮದ ವೆಂಕಟೇಶ್ (21) ಪ್ರಿಯತಮೆಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?
ಮೃತ ಬಾಲಕಿ ಹಾಗೂ ಯುವಕ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಬಾಲಕಿಯ ಪೋಷಕರ ವಿರೋಧವಿತ್ತು. ವಿರೋಧದ ನಡುವೆಯೂ ಇಬ್ಬರೂ ಕದ್ದು ಮುಚ್ಚಿ ಪ್ರೀತಿಸುತ್ತಿದ್ದರು. ಆದರೆ ಜನವರಿ 6 ರಂದು ಬಾಲಕಿ ವಿಷಸೇವಿಸಿ ಮನೆಯಲ್ಲಿ ನರಳುತ್ತಿದ್ದಳು. ಇದನ್ನು ಗಮನಿಸಿದ ಬಾಲಕಿ ಅಣ್ಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದನು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ. 8ರಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಳು. ಇತ್ತ ಬಾಲಕಿ ವಿಷ ಸೇವಿಸಿದ ದಿನವೇ ವೆಂಕಟೇಶ್ ಸಹ ವಿಷ ಕುಡಿದಿರುವುದಾಗಿ ನಾಟಕ ಮಾಡಿ ಆಸ್ಪತ್ರೆಗೆ ದಾಖಲಾಗಿ ಡಿಸ್ಜಾರ್ಜ್ ಕೂಡ ಆಗಿದ್ದನು. ಇದರಿಂದ ಇಬ್ಬರ ಪ್ರೀತಿಗೆ ಮನೆಯ ವಿರೋಧ ಇದ್ದ ಕಾರಣ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಬಾಲಕಿ ಸಾವನ್ನಪ್ಪಿ, ಪ್ರಿಯಕರ ಬದುಕುಳಿದಿದ್ದ ಎಂದು ಎಲ್ಲರೂ ನಂಬಿದ್ದರು.
ಪೊಲೀಸರು ಸಹ ಇದನ್ನೇ ನಂಬಿ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿ ಸುಮ್ಮನಾಗಿದ್ದರು. ವೆಂಕಟೇಶ್ ವಿಷ ಸೇವಿಸಿಲ್ಲ ನಾಟಕ ಮಾಡುತ್ತಿದ್ದಾನೆ ಎಂದು ಅರಿತಿದ್ದ ವೈದ್ಯರು ಈ ವಿಷಯವನ್ನ ಪೊಲೀಸರ ಗಮನಕ್ಕೆ ತಂದಿದ್ದರು. ಹೀಗಾಗಿ ಯುವಕನನ್ನ ವಶಕ್ಕೆ ಪಡೆದ ಗೌರಿಬಿದನೂರು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರಿಯಕರ ಸತ್ಯ ಬಾಯ್ಬಿಟ್ಟಿದ್ದಾನೆ.
ಕೊಲೆ ಯಾಕೆ?
ಮೃತ ಬಾಲಕಿ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಅನುಮಾನ ವೆಂಕಟೇಶ್‍ಗೆ ಇತ್ತು. ಹೀಗಾಗಿ ಜನವರಿ 6 ರಂದು ಆಕೆಗೆ ಕರೆ ಮಾಡಿ ತೊಂಡೆಬಾವಿ ಗ್ರಾಮದ ಬಳಿ ಬರುವಂತೆ ಹೇಳಿದ್ದನು. ಅಲ್ಲಿಗೆ ಬಂದಿದ್ದ ಬಾಲಕಿಯ ಜೊತೆ ವಾಗ್ವಾದ ಮಾಡಿ, ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿಲ್ಲವಾದರೆ ಈ ವಿಷ ಕುಡಿದು ಸಾಬೀತುಪಡಿಸು ಎಂದು ಆಗ್ರಹಿಸಿದ್ದನು. ಪ್ರಿಯಕರನ ಮಾತು ಕೇಳಿ ವಿಷ ಕುಡಿದು ಬಾಲಕಿ ಮನೆಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಾಟಕವಾಡಿದ್ದ ಪ್ರಿಯಕರ:
ವಿಚಾರಣೆ ವೇಳೆ ಪ್ರಿಯಕರ ಸತ್ಯ ಬಾಯ್ಬಿಟ್ಟಿದ್ದಾನೆ. ಬಾಲಕಿ ಸತ್ತರೆ ತನ್ನ ಮೇಲೆ ಬರುತ್ತೆ ಎಂದು ತಾನು ಸಹ ವಿಷ ತೆಗೆದುಕೊಂಡು ಬಂದು ಬಾಯಿಗೆ ಸವರಿಕೊಂಡು ಆಸ್ಪತ್ರೆ ಸೇರಿದ್ದನು. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಿಯಕರ ವೆಂಕಟೇಶ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪ್ರಿಯಕರನ್ನು ಬಂಧಿಸಿದ್ದಾರೆ.