– ಪ್ರೀತಿಗೆ ಅಡ್ಡಿಯಾದ ಅಮ್ಮನನ್ನೇ ಮುಗಿಸಿದ್ಳು
ಲಕ್ನೋ: ಅಪ್ರಾಪ್ತ ಮಗಳು ತನ್ನ ಪ್ರೀತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಶಶಿ ಶುಕ್ಲಾ ಕೊಲೆಯಾದ ಹೆಡ್ ಕಾನ್ಸ್‌ಸ್ಟೇಬಲ್. ಮೃತ ಶುಕ್ಲಾ ದೆಹಲಿಯ ಬ್ರಿಜ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ಲಾರನ್ನ ಸ್ವಂತ ಅಪ್ರಾಪ್ತ ಮಗಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸಂಚು ರೂಪಿಸಿ ಕೊಲೆ ಮಾಡಿದ್ದಾಳೆ.
ಪೊಲೀಸರು ಈ ಕುರಿತು ತನಿಖೆ ಮಾಡುವಾಗ ಈ ಕೃತ್ಯದಲ್ಲಿ ಮಗಳ ಭಾಗಿಯಾಗಿದ್ದಾಳೆ ಎಂದು ಶಂಕಿಸಿದ್ದಾರೆ. ನಂತರ ಪೊಲೀಸರು ಅಪ್ರಾಪ್ತ ಮಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಮೃತ ಶುಕ್ಲಾ ಮಗಳ ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಮೃತ ಶುಕ್ಲಾ ಅಪ್ರಾಪ್ತ ಮಗಳಿಗೆ ಪ್ರೀತಿಸುತ್ತಿರುವ ಹುಡುಗನ ಸಹವಾಸ ಬಿಡು ಎಂದು ಪದೇ ಪದೇ ಬುದ್ಧಿವಾದ ಹೇಳುತ್ತಿದ್ದರು. ಆದರೆ ಇದರಿಂದ ಅಪ್ರಾಪ್ತ ಮಗಳು ಕೋಪಗೊಂಡು ಪ್ರಿಯಕರನ ಜೊತೆ ಸೇರಿಕೊಂಡು ತಾಯಿಯನ್ನೇ ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆಯೇ ತಾಯಿಯನ್ನು ಕೊಲೆ ಮಾಡಿದ್ದಾಳೆ.
ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಅಪ್ರಾಪ್ತ ಮಗಳು ಮತ್ತು ಆಕೆಯ ಪ್ರೇಮಿ ಒಪ್ಪಿಕೊಂಡಿದ್ದಾರೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.