ಹಾಸನ: ಚನ್ನರಾಯಪಟ್ಟಣ ತಾಲೂಕಿನ ರಾಷ್ಟೀಯ ಹೆದ್ದಾರಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿದ್ದು, ಸುಮಾರು 10 ದಿನಗಳ ನಂತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಚಿತ್ರಾ(23) ಮೃತ ಯುವತಿ. ಈಕೆ ಬೆಂಗಳೂರು ಮೂಲದವಳಾಗಿದ್ದು, ಈಕೆಯನ್ನು ಪ್ರೀತಿಸುವ ನಾಟಕವಾಡಿ ಮಾವ ಶ್ರೀನಿವಾಸ್ ಹತ್ಯೆ ಮಾಡಿದ್ದನು. ಇದೀಗ ಹಿರಿಸಾವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮೃತ ಚಿತ್ರಾ ಆರೋಪಿ ಶ್ರೀನಿವಾಸ್‍ನ ಪತ್ನಿಯ ಸಹೋದರನ ಮಗಳಾಗಿದ್ದನು. ಚಿತ್ರಾ ಬೆಂಗಳೂರಿನ ಒರಿಯನ್ ಮಾಲಿನಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಶ್ರೀನಿವಾಸ್ ವಿವಾಹವಾಗಿ ಮಕ್ಕಳಿದ್ದರೂ ಚಿತ್ರಾಳ ಜೊತೆ ಪ್ರೀತಿಯ ನಾಟಕವಾಗಿದ್ದನು. ಚಿತ್ರಾಳಿಗೂ ಶ್ರೀನಿವಾಸ್‍ಗೆ ಮದುವೆಯಾಗಿರುವ ವಿಚಾರ ತಿಳಿದಿತ್ತು. ಆದರೂ ಆರೋಪಿ ಶ್ರೀನಿವಾಸ್‍ನನ್ನು ಪ್ರೀತಿಸುತ್ತಿದ್ದಳು. ಆದರೆ ಇಬ್ಬರ ನಡುವಿನ ಪ್ರೀತಿ ಪ್ರೇಮದಿಂದ ಚಿತ್ರಾ ಗರ್ಭಿಣಿಯಾಗಿದ್ದಳು.
ಚಿತ್ರಾ ಗರ್ಭಿಣಿಯಾದ ಸುದ್ದಿ ತಿಳಿದು ಆಕೆಯನ್ನ ಕೊಲೆ ಮಾಡಲು ಶ್ರೀನಿವಾಸ್ ಪ್ಲ್ಯಾನ್ ಮಾಡಿದ್ದನು. ಅದರಂತೆಯೇ ಚಿತ್ರಾಳ ಕುತ್ತಿಗೆ ಹಿಸುಕಿ ಆರೋಪಿ ಕೊಲೆ ಮಾಡಿ ಚನ್ನರಾಯಪಟ್ಟಣ ತಾಲೂಕಿನ ರಾಷ್ಟೀಯ ಹೆದ್ದಾರಿ 75ರ ಸಮೀಪದ ತೋಪಿನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದನು.
ಜುಲೈ 23 ರಂದು ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ಬಳಿ ಮೃತದೇಹ ಪತ್ತೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಮೃತದೇಹದ ಫೋಟೋ ವೈರಲ್ ಆಗಿತ್ತು. ಆ ಫೋಟೋವನ್ನು ನೋಡಿ ಪೊಲೀಸರಿಗೆ ಚಿತ್ರಾ ಕುಟುಂಬಸ್ಥರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದು, ಇದೀಗ ಆರೋಪಿ ಶ್ರೀನಿವಾಸನನ್ನು ಬಂಧಿಸಿದ್ದಾರೆ.