ಮಂಡ್ಯ: ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಎದುರಾಗಿದ್ದು, ಇದೀಗ ತಮ್ಮ ಜೀವ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗಾ ಗ್ರಾಮದ ಹರೀಶ್ ಮತ್ತು ಶಶಿಕಲಾ ಎಂಬವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆಗೆ ಶಶಿಕಲಾ ತಂದೆ ಹಾಗೂ ಚಿಕ್ಕಪ್ಪ ವಿರೋಧ ಇದೆ.
ಹರೀಶ್ ಮನೆಯವರು ಬಡಕುಟುಂಬದವರು ಎಂಬ ಕಾರಣಕ್ಕೆ ಶಶಿಕಲಾ ಮನೆಯವರು ವಿರೋಧ ಮಾಡುತ್ತಿದ್ದಾರೆ. ಇವರಿಬ್ಬರೂ ಕೂಡ ಚಿಕ್ಕ ವಯಸ್ಸಿನಿಂದಲೂ ಒಂದೇ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಂತಹಂತವಾಗಿ ಇವರಿಬ್ಬರ ನಡುವೆ ಪ್ರೀತಿ ಬೆಳದ ಕಾರಣ ಇಬ್ಬರೂ ಮನೆಯಲ್ಲಿ ಮದುವೆಯ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆದರೆ ಶಶಿಕಲಾ ಕುಟಂಬದರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಈ ಇಬ್ಬರು ಪ್ರೇಮಿಗಳು ಡಿಸಂಬರ್ 1ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಇಬ್ಬರೂ ಪದವಿಧರರಾಗಿದ್ದು, ಬೆಂಗಳೂರಿನ ಖಾಸಗಿ ಬ್ಯಾಂಕ್‍ನಲ್ಲಿ ಉದ್ಯೋಗ ಮಾಡುತ್ತಾ ತಮ್ಮ ಸಂಸಾರ ಸಾಗಿಸುತ್ತಿದ್ದಾರೆ. ಇದೀಗ ಹುಡುಗಿಯ ಚಿಕ್ಕಪ್ಪ ಈ ಇಬ್ಬರಿಗೂ ಹಾಗೂ ಹುಡುಗನ ಪೋಷಕರಿಗೆ ಜೀವ ಬೇದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಮಗೆ ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸರು ಭಾನುವಾರ ಎರಡು ಕುಟುಂಬದವರನ್ನು ಕರೆದು ರಾಜಿ ಸಂಧಾನ ಮಾಡಿದ್ದಾರೆ. ಹೀಗಿದ್ದರೂ ಸಹ ಶಶಿಕಲಾ ತಂದೆ ಮತ್ತು ಚಿಕ್ಕಪ್ಪ ಹರೀಶ್ ಕುಟುಂಬದವರ ಮೇಲೆ ಹಲ್ಲೆ ಮಾಡಿ ನವದಂಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಈ ಇಬ್ಬರು ತಮ್ಮ ಹಾಗೂ ಕುಟುಂಬದ ರಕ್ಷಣೆಗಾಗಿ ಮಂಡ್ಯ ಎಸ್‍ಪಿ ಅವರ ಮೊರೆ ಹೋಗಿದ್ದಾರೆ.