– ಆದ್ರೆ ಬದುಕಿನ ಧ್ರುವತಾರೆ ನೀನು..!
ಡಿಯರ್ ಅರುಂಧತಿ..
ನಿನ್ನ ಹೆಸರಿಗೆ ತಕ್ಕಂತೆ ನನ್ನ ಬದುಕಲ್ಲಿ ನಿನೊಂದು ನಿಗೂಢ ನಕ್ಷತ್ರ..! ಮದುವೆಯಾದ ಬಳಿಕ ವಧು – ವರರಿಗೆ ಹಾಡಹಗಲೇ ಆ ನಕ್ಷತ್ರವನ್ನು ತೋರಿಸುತ್ತಾರಂತೆ. ವಿಪರ್ಯಾಸ ಅಂದ್ರೆ, ಆ ನಕ್ಷತ್ರ ಕಡು ಕತ್ತಲಲ್ಲೂ ಕಾಣಿಸೋದಿಲ್ಲವಂತೆ..! ಆದರೆ ಹಗಲಲ್ಲಿ ತೋರಿಸಿದಂತೆ, ಕಂಡಂತೆ ನಟಿಸಿ ಬಿಡುತ್ತಾರೆ!
ನೀನಿಲ್ಲದ ನನ್ನ ಬದುಕು ಹಾಗೆ, ಸಿಕ್ಕು ಸಿಗದಂತೆ, ಕಂಡು ಕಾಣದಂತ ಭ್ರಮೆ ಹುಟ್ಟಿಸಿದ ಕತೆಯಾಗಿದೆ. ಅದ್ಯಾಕೆ ಬಂದೆ? ಅದೆಲ್ಲಿಗೆ ಮರಳಿ ಹೋದೆ? ಇದಕ್ಕೆಲ್ಲ ಉತ್ತರವೇ ಇಲ್ಲ. ಇದಕ್ಕೆಲ್ಲ ಉತ್ತರ ಹುಡುಕಿ ಸೋತು ಹೋಗಿದ್ದೇನೆ. ಈಗ ಗೆಲ್ಲುವ ಹಂಬಲವೂ ಇಲ್ಲ ಬಿಡು!
ಮೊನ್ನೆ ದೀಪಾವಳಿ ಹಬ್ಬದಂದು ಹಣತೆಗಳನ್ನು ಹಚ್ಚುವಾಗ ನಿನ್ನ ನೆನಪಾಯ್ತು. ನೀನು ಈ ದೀಪಗಳಂತೆ ನನ್ನ ಬಾಳ ದಾರಿಗೆ ಬೆಳಕಾಗಿದಿಯಲ್ಲ ಸೋ.. ಅದಕ್ಕೆ ನೆನಪಾಗಿದ್ದು ಅನ್ಸುತ್ತೆ. ಹಾಗೆ ಹೇಳೋದಾದ್ರೆ ನೀನೊಂಥರ ಧ್ರುವ ನಕ್ಷತ್ರ!
ನಾನು ಹಿಂದೊಮ್ಮೆ ಶೇಕ್ಸ್ಪಿಯರ್ ಸಾಲುಗಳನ್ನ ನಿನ್ನ ಜೊತೆ ಚರ್ಚಿಸಿದ್ದೆ ಅನ್ಸುತೆ. ನಿನಗೆ ನೆನಪಿಲ್ಲ ಅಂದ್ರೆ ಮತ್ತೊಮ್ಮೆ ಹೇಳ್ತೀನಿ ಕೇಳು, ಅದೇನಂದ್ರೆ ʻಪ್ರೇಮ ಅನ್ನೋದು ಧ್ರುವ ತಾರೆ ಇದ್ದ ಹಾಗೆ. ಜೀವನದ ಸಮುದ್ರ ಯಾನದಲ್ಲಿ, ಬಾಳ ಹಡಗಿಗೆ ಅದು ನಿರಂತರವಾಗಿ ದಿಕ್ಕು ತೋರಿಸುತ್ತಿರುತ್ತದೆ. ಪ್ರೇಮ ಅನ್ನೋದು ನಿಜವಾದ ಗೈಡ್ ಇದ್ದಂತೆ! ಇದನ್ನೇ ಆ ಪ್ರೇಮಕವಿ ಹೇಳಿದ್ದು. ನೀನು; ಈಗ ಇದೇ ಸಾಲುಗಳು ನನಗೆ!
ಕೆಲವು ಪ್ರೇಮ ಕತೆಗಳು ಶುರುವಾಗೋದು ಇಲ್ಲ, ಮುಗಿಯೋದು ಇಲ್ಲ. ಹಾಗಂತ ಆ ಪ್ರೇಮಿಗಳು ಒಂದಾಗಲೇ ಬೇಕು ಅಂತಾನೂ ಇಲ್ಲ. ನನ್ನೆದೆಯಲ್ಲಿ ಅರಳಿದ ಪ್ರೇಮವೂ ಹಾಗೆ, ಅದು ಅರಳಲೂ ಇಲ್ಲ, ಬಾಡಲೂ ಇಲ್ಲ. ಪ್ರೇಮದ ಹೂದೋಟದಲ್ಲಿ ನಿರಂತರ ಘಮ ಹೊತ್ತು ನಗುತ್ತಿರುತ್ತದೆ. ನಿನಗೂ ಹೀಗೆನಾ?
ಒಮ್ಮೆ ಇದನ್ನೆಲ್ಲ ಕೂತು ಮಾತಾಡೋಣ, ಪ್ರೇಮ ಯಾನವನ್ನು ಶುರು ಮಾಡೋದೋ, ಆ ಹಡಗನ್ನ ಮುಳುಗಿಸೋದೋ ಎಂಬ ನಿರ್ಧಾರ ಮಾಡೋಣ. ಅದಕ್ಕಾಗಿ ಇದೇ ಭಾನುವಾರ ʻಪವಿತ್ರವನ’ದ ಪಾರ್ಕ್ ಬಳಿ ಕಾಯ್ತಾ ಇರ್ತಿನಿ. ಸಿಗು.. ಮಾತಾಡೋಣ..
– ನಿನ್ನ ನಿರೀಕ್ಷೆಯಲ್ಲಿ ಕಾದಿರುವ
ಪ್ರೇಮಾಕಾಂಕ್ಷಿ

