ಬೆಂಗಳೂರು: ರಾಜ್ಯದಲ್ಲಿ ಅತೀವೃಷ್ಟಿ ಆಗ್ತಿರುವ ನಡುವೆಯೇ ಇಂದು ಭೂಕಂಪನದ ದೊಡ್ಡ ಸದ್ದು ಕೇಳಿಬಂದಿದೆ. ಕಳೆದ ಒಂದು ತಿಂಗಳಿಂದ ಕಲಬುರಗಿ, ವಿಜಯಪುರದ ಹಲವೆಡೆ ನಿರಂತರವಾಗಿ ಕಂಪನದ ಅನುಭವಗಳು ಆಗ್ತಾನೆ ಇವೆ. ಎರಡು ವಾರಗಳ ಹಿಂದೆ ಚಿಕ್ಕಬಳ್ಳಾಪುರದ ಚಿಂತಾಮಣಿಯ ಹಲವೆಡೆ ಇದೇ ರೀತಿಯ ಅನುಭವ ಆಗಿತ್ತು. ಇದೀಗ ಬೆಂಗಳೂರಿನ ಆರ್‍ಆರ್ ನಗರ, ಕೆಂಗೇರಿ, ಹೆಮ್ಮಿಗೆಪುರ ಸೇರಿದಂತೆ ಹಲವೆಡೆ ಮತ್ತು ರಾಮನಗರ, ಮಂಡ್ಯದಲ್ಲೂ ನಿಗೂಢ ಸದ್ದಿನ ಜೊತೆಗೆ ಭೂಮಿ ಕಂಪಿಸಿದ ಅನುಭವ ಆಗಿದೆ.
Advertisement
ಕಂಪನದ ಧಾಟಿಗೆ ಕೆಲವೆಡೆ ಮನೆಯಲ್ಲಿನ ವಸ್ತುಗಳು ಕೂಡ ಬಿದ್ದಿವೆ. ಮಧ್ಯಾಹ್ನ 12.15ಕ್ಕೆ ಈ ಅನುಭವ ಉಂಟಾಗಿದ್ದು, ಜನ ಭಯಭೀತರಾಗಿದ್ದರು. ಇದು ಭೂಕಂಪ, ಸೂಪರ್ ಸಾನಿಕ್ ಬೂಮ್‍ನಿಂದ ಉಂಟಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ವು. ಆದರೆ ಇದೆಲ್ಲ ಸುಳ್ಳು ಎನ್ನಲಾಗ್ತಿದೆ. ಇಂದು ನಿಗೂಢ ಸದ್ದು, ಕಂಪನ ಉಂಟಾದ ಜಾಗಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ಕೊಟ್ಟು ಪರಿಶೀಲಿಸಿದೆ. ಇನ್ನೆರಡು ದಿನಗಳಲ್ಲಿ ನಿಖರ ಕಾರಣ ಏನು ಎಂಬ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ. ದಾಖಲೆಯ ಮಳೆಯಿಂದಾಗಿ ಭೂಮಿ ಹೆಚ್ಚು ನೀರು ಹೀರಿಕೊಂಡ ಪರಿಣಾಮ ಆಳದಲ್ಲಿ ಏರ್ ಕ್ರಾಕ್ ಉಂಟಾಗಿ ಈ ರೀತಿಯ ಸದ್ದು ಬಂದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
Advertisement
Advertisement
ಈ ಮಧ್ಯೆ ಭಾರತ-ಮಯನ್ಮಾರ್ ಗಡಿಯಲ್ಲಿ ಇಂದು ನಸುಕಿನ ಜಾವ 5.15ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ಬಾಂಗ್ಲಾದ ಚಿತ್ತಗಾಂಗ್‍ನಿಂದ ಪೂರ್ವಕ್ಕೆ 174 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.3ರಷ್ಟು ದಾಖಲಾಗಿದೆ. ಇದರ ಪ್ರಭಾವ ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂ ಮೇಲಾಗಿದೆ. ಗುವಾಹಟಿಯ ಹಲವೆಡೆ ಸುಮಾರು 30 ಸೆಕೆಂಡ್ ಭೂಮಿ ಕಂಪಿಸಿದೆ. ಆದರೆ ಮಯನ್ಮಾರ್ ಗಡಿಯಲ್ಲಿ ಉಂಟಾದ ಭೂಕಂಪನಕ್ಕೂ, ಬೆಂಗಳೂರು ಸುತ್ತ ಮುತ್ತ ಕೇಳಿಬಂದ ನಿಗೂಢ ಸದ್ದಿಗೂ ಸಂಬಂಧ ಇಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ನೀಲಗಿರಿ ತೋಪಿನಲ್ಲಿ ಯುವತಿ ಮೇಲೆ ರೇಪ್ – 10 ದಿನವಾದ್ರೂ ನ್ಯಾಯ ಸಿಕ್ಕಿಲ್ಲವೆಂದು ಪೋಷಕರು ಕಣ್ಣೀರು
Advertisement
ಇತ್ತ ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ ಮತ್ತು ಕಗ್ಗಲಿಪುರದ ನಿವಾಸಿಗಳಿಗೆ ಇಂದು ಬೆಳಗ್ಗೆ 11.50 ಮತ್ತು ಮಧ್ಯಾಹ್ನ 12.15ಕ್ಕೆ ನಿಗೂಢ ಸದ್ದು ಮತ್ತು ಲಘವಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಭೂಕಂಪನ/ಸಂಭವನೀಯ ಭೂಕಂಪನದ ಸಂಕೇತಗಳು ಹೊಮ್ಮಿವೆಯೇ ಎಂಬುದನ್ನು ನಿಗೂಢ ಸದ್ದು ಮತ್ತು ಕಂಪನದ ಬಗ್ಗೆ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಸಂಸ್ಥೆಯ ವಿಶ್ಲೇಷಕರು ಪರಿಶೀಲಿಸಿದ್ದಾರೆ. ಆದರೆ ಭೂಮಿ ಕಂಪಿಸಿದ ಬಗ್ಗೆ ಸಿಸ್ಮೋಗ್ರಾಫ್‍ನಲ್ಲಿ ಯಾವುದೇ ಸಂಕೇತಗಳು ದಾಖಲಾಗಿಲ್ಲ.
ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯೂ ಕೂಡ ಭೂಕಂಪನವಾಗಿರೋ ಸಾಧ್ಯತೆಯನ್ನು ಅಲ್ಲಗೆಳೆದಿದೆ. ನಿಗೂಢ ಸದ್ದಿಗೆ ಕಾರಣ ಏನೆಂದು ತಿಳಿದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸೋದಾಗಿ ಸಚಿವ ಸಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ನನಗೂ ನಿಗೂಢ ಶಬ್ಧ ಕೇಳಿಬಂತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.