ಮಂಡ್ಯ: ಸತತವಾಗಿ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಪಡಿತರ ಅಕ್ಕಿ ಮತ್ತು ಬೇಳೆ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಆರ್ ಪೇಟೆ ಸೊಸೈಟಿಯಿಂದ ನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಾರಿಯಲ್ಲಿ ಪಡಿತರ ಅಕ್ಕಿ ಮತ್ತು ಬೇಳೆಯನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ನಾಯಕನಹಳ್ಳಿ ಕೆರೆಗೆ ಅಡ್ಡಲಾಗಿ ವಾಹನ ಸಂಚರಿಸಲು ಕಟ್ಟಲಾಗಿದ್ದ ಸೇತುವೆ ಮೇಲೆ ಬಂದಿದೆ. ಆದರೆ ಸತತ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ತಕ್ಷಣ ಕುಸಿದಿದೆ. ಪರಿಣಾಮ ಪಡಿತರರಿಗಾಗಿ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿದೆ.
Advertisement
Advertisement
ಲಾರಿ ನೀರಿನಲ್ಲಿ ಬಿದ್ದುದ್ದರಿಂದ ಸುಮಾರು 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ನೀರಿಗೆ ಧುಮುಕಿ ಆಹಾರ ವಸ್ತುಗಳನ್ನು ಮೇಲೆತ್ತಲು ಲಾರಿಯವರಿಗೆ ಸಹಾಯ ಮಾಡಿದ್ದಾರೆ. ಈ ಸೇತುವೆ ಸುಮಾರು 22 ವರ್ಷ ಹಳೆಯದಾಗಿದ್ದು, ಮಳೆಯಿಂದ ನನೆದು ಸೇತುವೆ ಕುಸಿದಿದೆ. ಇದರಿಂದಾಗಿ ಸಂತೆಬಾಚಹಳ್ಳಿ ಮತ್ತು ನಾಯಕನಹಳ್ಳಿ ಮಾರ್ಗ ಸಂಪೂರ್ಣ ಕಡಿತವಾಗಿದೆ.
Advertisement
ಇನ್ನೂ ಲಾರಿ ನೀರಿಗೆ ಬಿದ್ದಿದ್ದು, ಸದ್ಯಕ್ಕೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ತಕ್ಷಣ ಕ್ರೇನ್ ತರಿಸಿ ಮೇಲೆತ್ತದಿದ್ದರೆ, ಮತ್ತಷ್ಟು ಅಪಾಯವಾಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.