– ಮಗು ಮೃತಪಟ್ಟಿದ್ದಕ್ಕೆ ಲಾರಿ ಚಾಲಕನಿಗೆ ಥಳಿತ
– ಡೋರ್ ತೆರೆದ ಕಾರು ಚಾಲಕನ ಮೇಲೂ ಕೇಸ್
ಬೆಂಗಳೂರು: ಅಪಘಾತವೆಸಗಿದ್ದ ಲಾರಿ ಚಾಲಕನಿಗೆ ಥಳಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಕೇಶ್, ಈಶ್ವರಿ, ಆನಂದ್, ಪ್ರಮೋದ್, ಪ್ರಕಾಶ್ ಸೇರಿದಂತೆ ಆರು ಆರೋಪಿಗಳು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಮಾರ್ಚ್ 10ರಂದು ಸಂಜೆ ಸುಮಾರು 4.30ಕ್ಕೆ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅರ್ಹಾನ್(6) ಬಾಲಕ ಮೃತಪಟ್ಟಿದ್ದನು.
ಏನಿದು ಪ್ರಕರಣ?
ಮೃತ ಅರ್ಹಾನ್ ಜೊತೆ ಚಿಕ್ಕಮ್ಮ ಈಶ್ವರಿ ದ್ವಿಚಕ್ರ ವಾಹನದಲ್ಲಿ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಹೋಗುತ್ತಿದ್ದಳು. ಈ ವೇಳೆ ಲಾರಿಯನ್ನು ಓವರ್ ಟೇಕ್ ಮಾಡಲು ಈಶ್ವರಿ ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಕಾರಿನ ಡೋರ್ ಓಪನ್ ಆಗಿದ್ದರಿಂದ ಆಕೆ ರಸ್ತೆಗೆ ಬಿದ್ದಿದ್ದು, ಮಗು ಲಾರಿಗೆ ಸಿಲುಕಿ ಸಾವನ್ನಪ್ಪಿದೆ.
ಮಗು ಮೃತಪಟ್ಟಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಚಾಲಕನ ವಿಪರೀತ ರಕ್ತಸ್ತ್ರಾವವಾಗಿ ತಕ್ಷಣ ಆತನನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾರಿ ಚಾಲಕ ರಾಧೇಶ್ಯಾಮ್ ಮೃತಪಟ್ಟಿದ್ದ. ಮೃತ ಚಾಲಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಅಪಘಾತದ ಸತ್ಯಾಸತ್ಯತೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ರಾಕೇಶ್ ಮತ್ತು ಈಶ್ವರಿ ಗಂಡ ಹೆಂಡತಿಯಾಗಿದ್ದು, ಪ್ರಮೋದ್ ಮತ್ತು ಪ್ರಕಾಶ್ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಚಾಲಕನದ್ದು ಯಾವುದೇ ತಪ್ಪು ಇರಲಿಲ್ಲ. ಮಹಿಳೆಯೇ ಲಾರಿಯನ್ನು ಓವರ್ ಟೇಕ್ ಮಾಡುವ ಅವಸರದಲ್ಲಿ ಮುಂದೆ ನುಗ್ಗಿದ್ದಾಳೆ. ಮುಂದೆ ಇದ್ದ ಕಾರಿನ ಡೋರ್ ಓಪನ್ ಮಾಡಿದ್ದು ಅಪಘಾತವಾಗಲು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡೋರ್ ಓಪನ್ ಮಾಡಿದ ತಪ್ಪಿಗೆ ಕಾರಿನ ಚಾಲಕನ ಮೇಲೂ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://www.youtube.com/watch?v=j_RhzBNaWJM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv