ಚಿಕ್ಕಮಗಳೂರು: ಅಪಘಾತವಾಗಿ ನಿಂತಿದ್ದ ಕಾರನ್ನ ನೋಡಲು ಹೋಗಿ ಸಫಾರಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ.
ಆಲ್ಟೋ ಕಾರೊಂದು ಇಂದು ಬೆಳಗ್ಗೆ ಅಪಘಾತವಾಗಿ ರಸ್ತೆ ಬದಿ ನಿಂತಿತ್ತು. ಮಂಗಳೂರಿನಿಂದ ಬರುತ್ತಿದ್ದ ಸಫಾರಿ ಕಾರಿನ ಚಾಲಕ ಅಪಘಾತವಾಗಿ ನಿಂತಿದ್ದ ಈ ಕಾರನ್ನು ನೋಡಲು ಹೋಗಿ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ್ರೆ, ಚಾಲಕನಿಗೆ ಮಾತ್ರ ಗಂಭೀರ ಗಾಯವಾಗಿದೆ.
ಚಿಕ್ಕಮಗಳೂರಿನ ಗಾಂಧಿ ನಗರ ನಿವಾಸಿಗಳಾದ ಗೌಸ್ ಹಾಗೂ ಶಬನಂ ಕುಟುಂಬ ಮಗಳನ್ನ ಮಂಗಳೂರಿನ ಕಾಲೇಜಿಗೆ ಸೇರಿಸಿ ಬರುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಚಾಲಕ ಸರ್ದಾರ್ ಗೆ ಗಂಭೀರ ಗಾಯವಾದರೆ, ಸಹಪ್ರಯಾಣಿಕರಾದ ಗೌಸ್, ಶಬನಂ ಹಾಗೂ ಶಿಫಾಗೆ ಸಣ್ಣಪುಟ್ಟ ಗಾಯಗಳಾಗಿವೆ.
ಧಾರಾಕಾರವಾಗಿ ಸುರಿಯುತ್ತಿರೋ ಮಳೆಯ ಮಧ್ಯೆಯೂ ಸಾರ್ವಜನಿಕರು ಹಾಗೂ ಪೊಲೀಸರು ಹರಸಾಹಸ ಪಟ್ಟು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದೃಷ್ಟವತಾಶ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.