ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ

Public TV
1 Min Read
SUMALATHA AMBAREESH BJP

ಬೆಂಗಳೂರು: ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರು ಇಂದು ಭಾರತೀಯ ಜನತಾ ಪಕ್ಷ (BJP)ಕ್ಕೆ ಸೇರ್ಪಡೆಗೊಂಡಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಮಲತಾ ಅವರಿಗೆ ಪಕ್ಷದ ಬಾವುಟ ನೀಡಿ ಬಿಜೆಪಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ  ರಾಧಾಮೋಹನ್ ದಾಸ್ ಅಗರವಾಲ್ ಅವರು ಸುಮಲತಾರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದ ಪತ್ರ ನೀಡಿದರು.

ಸುಮಲತಾ ಅಂಬರೀಶ್ ಜೊತೆಗೆ ದೊಡ್ಡ ಗಣೇಶ್, ಕೊಪ್ಪಳ ಮಾಜಿ ಸಂಸದ ಎಸ್ ಶಿವರಾಮೇಗೌಡ (ಕಾಂಗ್ರೆಸ್ ತೊರೆದು ಬಿಜೆಪಿ ಸೆರ್ಪಡೆ), ಸಚಿವ ಶಿವಾನಂದ ಪಾಟೀಲ್ ಸಂಬಂಧಿ ಹರ್ಷಗೌಡ ಪಾಟೀಲ್, ಹಳಿಯಾಳದ ಶ್ರೀನಿವಾಸ್ ಹಾಗೂ ಹಳಿಯಾಳದ ತುಕಾರಾಂ ಗೌಡ ಪಾಟೀಲ್ ಬಿಜೆಪಿಗೆ ಸೇರಿದರು.

ಬಿ.ಎಸ್‌ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಆರ್‌ ಅಶೋಕ್, ಡಿ.ವಿ ಸದಾನಂದ ಗೌಡ, ಸಿ.ಟಿ ರವಿ, ಕೆ.ಸಿ ನಾರಾಯಣ ಗೌಡ, ಮುನಿರತ್ನ ಹಾಗೂ ಮಂಡ್ಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪಕ್ಷ ಸೇರ್ಪಡೆಗೂ ಮುನ್ನ ಸುಮಲತಾ ಅವರು ಕಂಠೀರವ ಸ್ಡುಡಿಯೋದ ಆವರಣದಲ್ಲಿರುವ ಅಂಬರೀಶ್ (Ambareesh) ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ , ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮೈತ್ರಿ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ಅವರಿಗೆ ಟಿಕೆಟ್ ಮಿಸ್‌ ಆಯ್ತು. ಆದರೂ ಅವರು ಬಿಜೆಪಿ (BJP) ಸೇರುತ್ತಾರೆ ಎಂದೇ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

SUMALATHA

ಆ ಬಳಿಕ ಸುಮಲತಾ ಅವರೇ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಸುಮಲತಾ ಅವರು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.

Share This Article