ಯಾದಗಿರಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರಿಗೆ ಅರಿವು ಮೂಡಿಸಲು ಇಂದು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲಾಯಿತು.
ಯಾದಗಿರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ಯಾರಾಗ್ಲೈಡಿಂಗ್ ಮೂಲಕ ಸಂಚರಿಸಿ ಪ್ರಚಾರ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಪ್ಯಾರಾಗ್ಲೈಡಿಂಗ್ ಗೆ ಚಾಲನೆ ನೀಡಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಏಪ್ರಿಲ್ 23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತಾದನದಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರನೂ ಕೂಡ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಇಂದು ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು. ವಿಶೇಷವಾಗಿ ಈ ಬಾರಿ ವಿಕಲಚೇತನರೆಲ್ಲರೂ ಕೂಡ ಮತದಾನದಲ್ಲಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಸರಿಸುಮಾರು 8 ಸಾವಿರದ 900 ಮಂದಿ ವಿಕಲಚೇತನರನ್ನು ಈಗಾಗಲೇ ಗುರುತಿಸಿದ್ದೇವೆ. ಅವರೆಲ್ಲರಿಗೂ ವಿಶೇಷ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ಯಾರಾಗ್ಲೈಡಿಂಗ್ ನಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಓ ಕವಿತಾ ಮನ್ನಿಕೇರಿ ಹಾಗೂ ಎಸ್ ಪಿ ಋಷಿಕೇಸ್ ಭಗವಾನ್ ಸಂಚಾರ ಮಾಡಿದ್ರು. ಇದು ನಗರದೆಲ್ಲೆಡೆ ಸುಮಾರು 200 ಮೀಟರ್ ಎತ್ತರದಲ್ಲಿ ಸಂಚಾರ ಮಾಡಿತು. ಒಟ್ಟಿನಲ್ಲಿ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ `ನಿಮ್ಮ ಮತ ನಿಮ್ಮ ಹಕ್ಕು. ತಪ್ಪದೆ ನೈತಿಕವಾಗಿ ಹಕ್ಕು ಚಲಾಯಿಸಿ’ ಎನ್ನುವ ಜಾಗೃತಿ ಬರಹದೊಂದಿಗೆ ಪ್ರಚಾರ ಕೈಗೊಳ್ಳಲಾಯಿತು.