ಕಲಬುರಗಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಸಂಖ್ಯಾ ಶಾಸ್ತ್ರದ ಮೊರೆ ಹೋಗಿದ್ದಾರೆ. ಹೀಗಾಗಿ ಇಂದು ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆ ನಾಳೆಗೆ ಮುಂದೂಡಿಕೆಯಾಗಿದೆ.
ಹೌದು. ಇತ್ತೀಚೆಗೆ ಕಲಬುರಗಿಯ ಬಿಜೆಪಿ ಮಹಿಳಾ ಮುಖಂಡೆ ಮಹೇಶ್ವರಿ ವಾಲಿ ಅವರ ಮನೆಗೆ ಶ್ರೀ ಕೇದಾರ ಜಗದ್ಗುರುಗಳು ಭೇಟಿ ನೀಡಿದ್ದರು. ಜಾಧವ್ ಶ್ರೀಗಳ ಆಶೀರ್ವಾದ ಪಡೆಯಲು ಅವರ ಮನೆಗೆ ತೆರಳಿದ್ದಾಗ ಏ.2 ನಿಮಗೆ ಒಳ್ಳೆಯ ದಿನವಲ್ಲ. ಏ.3ರಂದು ನಿಮಗೆ ಒಳ್ಳೆಯ ದಿನವಾಗಿದೆ. ಹೀಗಾಗಿ ಅಂದೇ ನಾಮಪತ್ರ ಸಲ್ಲಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಏ.3 ರಂದು ನಾಮಪತ್ರ, ಏ. 23ರಂದು ಮತದಾನ ಹಾಗೂ ಮೇ23 ರಂದು ಮತ ಏಣಿಕೆಯಿದೆ. ಹೀಗಾಗಿ 3, 23, 23ರ ಅಂಕಿಯ ಜೊತೆ ಹೋಗಿ ಉಜ್ವಲ ಭವಿಷ್ಯವಿದೆ ಎಂದು ಶ್ರೀಗಳು ಆಶೀರ್ವಾದಿಸಿದ್ದಾರೆ. ಹೀಗಾಗಿ ಉಮೇಶ್ ಜಾಧವ್ ಏ.3 ರಂದು ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
ಮಾಜಿ ಸಚಿವ ಗಂಭೀರ ಆರೋಪ:
ಇತ್ತ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಬಾಬುರಾವ್ ಚೌವ್ಹಾಣ್, ಡಾ. ಉಮೇಶ್ ಜಾಧವ್ ಬಳಿ ಯಡಿಯೂರಪ್ಪನವರು ಹಣ ಪಡೆದು ಲೋಕಸಭೆಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಎಸ್‍ವೈಗೆ ದುಡ್ಡು ಬೇಕು ಅಷ್ಟೇ. ಅವರಿಗೆ ಪಾರ್ಟಿ ಮುಖ್ಯವಲ್ಲ. ಬಿಎಸ್‍ವೈಗೆ ಹಣ ನೀಡಿ ಟಿಕೆಟ್ ಪಡೆಯಲು ಜಾಧವ್ ಮುಂಬೈನಿಂದ ಕಂತೆ ಕಂತೆ ಹಣ ತಂದಿದ್ದು, ಆ ಹಣವನ್ನ ನೇರವಾಗಿ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಲಬುರಗಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಅನ್ನು ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬಸವರಾಜ್ ಮತ್ತಿಮೂಡ್‍ಗೆ ಮಾರಾಟ ಮಾಡಿದ್ದಾರೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಜೊತೆ ಕೆಜೆಪಿಗೆ ಬಂದೆ, ನಂತರ ಬಿಜೆಪಿಗೂ ಬಂದೆ. ಆದರೆ ನೀವು ನಮ್ಮನ್ನ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ:
ನಾನು ಬಿಜೆಪಿಗೆ ಹೋದಮೇಲೆ ಪಕ್ಷಕ್ಕಾಗಿ ಸುಮಾರು 2 ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಬಿಜೆಪಿಯಲ್ಲಿದ್ದ ರೇವುನಾಯಕ್ ಬೆಳಮಗಿ ಅವರನ್ನ ಸೋಲಿಸಲು ನನ್ನನ್ನು ಚೆನ್ನಾಗಿ ಬಳಸಿಕೊಂಡರು. ಮುಂದೆ ಜಾಧವ್ ಪರಿಸ್ಥಿತಿ ಇದೇ ರೀತಿ ಆಗಲಿದ್ದು, ಹರಕೆಯ ಕುರಿಯಾಗ್ತಾರೆ ಎಂದ ಅವರು, ನಾಳೆ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಇದೇ ವೇಳೆ ಚೌವ್ಹಾಣ್ ತಿಳಿಸಿದ್ರು.