ನವದೆಹಲಿ: ಲೋಕಸಭಾ ಚುನಾವಣಾ ಹೊಸ್ತಿನಲ್ಲಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಿದ್ದು, ಟಿಡಿಪಿ ಸಂಸದರು ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಇಂದು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿಡಿಪಿ ನಾಯಕ, ಕಾಕಿನಾಡ ಸಂಸದ ಕೆಸಿನೇನಿ ಶ್ರೀನಿವಾಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದಕ್ಕೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜುಲೈ 20ರಂದು ಲೋಕಸಭೆಯಲ್ಲೂ, 23ರಂದು ರಾಜ್ಯಸಭೆಯಲ್ಲೂ ಚರ್ಚೆಗೆ ಅವಕಾಶ ನೀಡಿದ್ದಾರೆ. ಇದನ್ನು ಓದಿ: ಎನ್‍ಡಿಎಯಿಂದ ಹೊರಬಂದ ಟಿಡಿಪಿ: ಲೋಕಸಭೆ, ರಾಜ್ಯಸಭೆಯಲ್ಲಿ ಬಲಾಬಲ ಹೇಗಿದೆ?
Advertisement
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣಕ್ಕೆ ಮೈತ್ರಿಕೂಟದ ಸದಸ್ಯರಾಗಿದ್ದ ಟಿಡಿಪಿ ಮಾರ್ಚ್ ತಿಂಗಳಲ್ಲಿ ಎನ್‍ಡಿಎಗೆ ಗುಡ್‍ಬೈ ಹೇಳಿತ್ತು. ಈ ಹಿನ್ನೆಲೆ, ಶೂನ್ಯ ವೇಳೆಯಲ್ಲಿ ಟಿಡಿಪಿಯ ಸದಸ್ಯ ಶ್ರೀನಿವಾಸ್ ಮಂಡಿಸಿದ್ದ ನಿರ್ಣಯವನ್ನು ಸ್ಪೀಕರ್ ಒಪ್ಪಿಕೊಂಡರು. ಇನ್ನು ಅವಿಶ್ವಾಸ ನಿರ್ಣಯ ಎದರಿಸಲು ನಾವು ಸಿದ್ಧ. ಲೋಕಸಭೆಯಲ್ಲಿ ನಮಗೆ ಹೆಚ್ಚು ಬಹುಮತವಿದ್ದು, ಗೆಲುವು ನಿಶ್ಚಿತ ಅಂತ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಒಂದು ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿ ನೀಡದಿದ್ದರೇ, ಟಿಡಿಪಿ ಸಂಸದರು ವಿಪಕ್ಷ ನಾಯಕರು ಹಾಗೂ ಇತರೆ ಪಕ್ಷದ ಸದಸ್ಯರೊಂದಿಗೆ ಸೇರಿ ಪ್ರತಿಭಟನೆಗೆ ಇಳಿಯಲು ಮುಂದಾಗಿದ್ದರು ಎಂದು ವರದಿಯಾಗಿದೆ.