ನವದೆಹಲಿ: ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಕಾಂಗ್ರೆಸ್ಸಿಗಿಂತ ಅತಿ ಹೆಚ್ಚು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ಇಲ್ಲಿಯವರೆಗೆ 437 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದರೆ ಕಾಂಗ್ರೆಸ್ 425 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
2014ರಲ್ಲಿ ಮೋದಿ ಅಧಿಕಾರಕ್ಕೆ ಏರಿದ ಬಳಿಕ ಬಿಜೆಪಿ ತನ್ನ ಮತಗಳಿಕೆಯನ್ನು ವೃದ್ಧಿಸಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಕರ್ನಾಟಕ, ಬಿಹಾರ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ಕಡೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ.
Advertisement
Advertisement
ಬಿಜೆಪಿ 2014ರ ಚುನಾವಣೆಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಆಂಧ್ರ ಮತ್ತು ತೆಲಂಗಾಣದಲ್ಲಿ ಮೈತ್ರಿ ಮಾಡದೇ ಏಕಾಂಗಿಯಾಗಿ ಕಣಕ್ಕೆ ಇಳಿಯುತ್ತಿರುವ ಕಾರಣ ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ.
Advertisement
2009 ರಲ್ಲಿ ಬಿಜೆಪಿ 433 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 116 ರಲ್ಲಿ ಜಯಗಳಿಸಿದ್ದರೆ ಕಾಂಗ್ರೆಸ್ 440 ಕಡೆ ಸ್ಪರ್ಧಿಸಿ 206 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 428 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 282ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 464 ಕಡೆ ಸ್ಪರ್ಧಿಸಿ ಕೇವಲ 44 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತ್ತು.
Advertisement
2009 ಮತ್ತು 2014 ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‍ಪಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 2009 ರಲ್ಲಿ 500 ಕಡೆ, 2014 ರಲ್ಲಿ 503 ಕಡೆ ಸ್ಪರ್ಧಿಸಿತ್ತು. ಈ ವರ್ಷ 139 ಕ್ಷೇತ್ರಗಳಲ್ಲಿ ಬಿಎಸ್‍ಪಿ ಸ್ಪರ್ಧಿಸುತ್ತಿದೆ.
1980 ರಲ್ಲಿ ಸ್ಥಾಪನೆಗೊಂಡಿದ್ದ ಬಿಜೆಪಿ 1984 ರ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಗೆದ್ದುಕೊಂಡಿತ್ತು. ನಂತರ ನಡೆದ ಚುನಾವಣೆಯಲ್ಲಿ 85(1989), 120(1991), 161(1996), 182(1998), 182(1999), 145(2004), 116(2009), 282(2014) ಸ್ಥಾನಗಳನ್ನು ಗೆದ್ದುಕೊಂಡಿತ್ತು.