– ಬಿಜೆಪಿ ಅಭ್ಯರ್ಥಿ ವಿರುದ್ಧದ ಒಳಜಗಳ ಶಮನ ಆಗುತ್ತಾ?
ರಾಜಧಾನಿ ಬೆಂಗಳೂರಿಗೆ ತುಂಬಾ ಹತ್ತಿರವಿರುವ, ಅಷ್ಟಾಗಿ ಅಭಿವೃದ್ಧಿ ಕಾಣದ ಜಿಲ್ಲೆ ತುಮಕೂರು. ತೆಂಗು, ಅಡಿಕೆ, ರಾಗಿ, ಶೇಂಗಾ ಇಲ್ಲಿನ ಪ್ರಮುಖ ಬೆಳೆಗಳು. ತುಮಕೂರು (Tumakuru) ಎಂದಾಕ್ಷಣ ಎಲ್ಲರಿಗೂ ಥಟ್ಟನೆ ನೆನಪಾಗುವುದು ಸಿದ್ದಗಂಗಾ ಮಠ. ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು (Siddaganga Shree) ಶಿಕ್ಷಣ ಸಂಸ್ಥೆಗಳನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ತುಮಕೂರು ಅಷ್ಟೇ ಅಲ್ಲ ಈ ರಾಜ್ಯದ ಜನತೆಗೆ ಸಿದ್ದಗಂಗಾ ಶ್ರೀಗಳು, ಸಿದ್ದಗಂಗಾ ಮಠವೆಂದರೆ ಭಕ್ತಿ-ಭಾವದ ಪ್ರತೀಕ.
ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆರಂಭದಲ್ಲಿ ಕ್ಷೇತ್ರ ಕಾಂಗ್ರೆಸ್ (Congress) ಭದ್ರಕೋಟೆಯಾಗಿತ್ತು. ಪ್ರಜಾ ಸಮಾಜವಾದಿ ಪಕ್ಷ, ಬಿಜೆಪಿ, ಜೆಡಿಎಸ್ ಪಕ್ಷಗಳೂ ಇಲ್ಲಿ ಅಸ್ತಿತ್ವ ಕಂಡುಕೊಂಡವು. ಸದ್ಯ ತುಮಕೂರು ಕ್ಷೇತ್ರ ಬಿಜೆಪಿ (BJP) ಹಿಡಿತದಲ್ಲಿದೆ. ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಹಾಗೆಯೇ ಉಳಿಸಿಕೊಂಡಿದೆ. ಆದ್ದರಿಂದ ಈ ಬಾರಿ ಕ್ಷೇತ್ರ ಎರಡು ಪಕ್ಷಗಳ ನೇರ ಹಣಾಹಣೆಗೆ ವೇದಿಕೆಯಾಗಲಿದೆ. ಜೆಡಿಎಸ್ ಮತಗಳೂ ಇಲ್ಲಿ ನಿರ್ಣಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಮೈತ್ರಿ ಪಕ್ಷ ಬಿಜೆಪಿಗೆ ವರದಾನವಾಗಬಹುದು.
Advertisement
Advertisement
ಕ್ಷೇತ್ರ ಪರಿಚಯ
ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ ತುಮಕೂರು. 1967 ರಲ್ಲಿ ಪ್ರಜಾ ಸಮಾಜವಾದಿ ಪಕ್ಷ ಮೊದಲ ಗೆಲುವು ದಾಖಲಿಸಿದ್ದು ಬಿಟ್ಟರೆ 90 ರ ದಶಕದವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿತ್ತು. 1991 ರಲ್ಲಿ ಎಸ್.ಮಲ್ಲಿಕಾರ್ಜುನಯ್ಯ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಂಡಿತು. ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಜೆಡಿಎಸ್ ಗೆದ್ದಿರುವುದು (1996-ಸಿ.ಎನ್.ಭಾಸ್ಕರಪ್ಪ) ಒಂದೇ ಒಂದು ಸಲ. ಅದಾದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿವೆ.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ತುಮಕೂರು ನಗರ (ಬಿಜೆಪಿ-ಜ್ಯೋತಿ ಗಣೇಶ್), ತುಮಕೂರು ಗ್ರಾಮಾಂತರ (ಬಿಜೆಪಿ-ಸುರೇಶ್ ಗೌಡ), ಗುಬ್ಬಿ (ಕಾಂಗ್ರೆಸ್-ಎಸ್.ಆರ್.ಶ್ರೀನಿವಾಸ್), ತುರುವೇಕೆರೆ (ಜೆಡಿಎಸ್-ಎಂ.ಟಿ.ಕೃಷ್ಣಪ್ಪ), ಚಿಕ್ಕನಾಯಕನಹಳ್ಳಿ (ಜೆಡಿಎಸ್-ಸಿ.ಬಿ.ಸುರೇಶ್ ಬಾಬು), ತಿಪಟೂರು (ಕಾಂಗ್ರೆಸ್-ಷಡಕ್ಷರಿ), ಕೊರಟಗೆರೆ (ಕಾಂಗ್ರೆಸ್-ಡಾ.ಜಿ.ಪರಮೇಶ್ವರ್), ಮಧುಗಿರಿ (ಕಾಂಗ್ರೆಸ್-ಕೆ.ಎನ್.ರಾಜಣ್ಣ). ಇದನ್ನೂ : Raichuru Lok Sabha 2024: ರಾಜರ ಊರಲ್ಲಿ ಪಟ್ಟಕ್ಕೇರೋದು ಯಾರು?
Advertisement
ಒಟ್ಟು ಮತದಾರರ ಸಂಖ್ಯೆ
ಕ್ಷೇತ್ರದಲ್ಲಿ ಒಟ್ಟು 16,51,403 ಮತದಾರರಿದ್ದಾರೆ. ಅವರ ಪೈಕಿ ಪುರುಷರು 8,14,555 ಹಾಗೂ ಮಹಿಳಾ ಮತದಾರರು 8,36,775 ಇದ್ದಾರೆ. ತೃತೀಯ ಲಿಂಗಿ ಮತದಾರರು 73 ಮಂದಿಯಿದ್ದಾರೆ
.
2019ರ ಚುನಾವಣೆಯಲ್ಲಿ ಏನಾಗಿತ್ತು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಮೈತ್ರಿ (ಕಾಂಗ್ರೆಸ್-ಜೆಡಿಎಸ್) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಜಿ.ಎಸ್.ಬಸವರಾಜು ಸ್ಪರ್ಧಿಸಿ ದೊಡ್ಡಗೌಡ್ರ ವಿರುದ್ಧ ಜಯಭೇರಿ ಬಾರಿಸಿದರು. 13,339 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ ಸಿಕ್ಕಿತು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಕಣಕ್ಕಿಳಿದಿದ್ದವು. ಈ ವೇಳೆ ತುಮಕೂರಿನಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಖುದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಣಕ್ಕಿಳಿದಿದ್ದರು. ಹೀಗಾಗಿ ತುಮಕೂರು ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿತ್ತು. ತನ್ನ ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನ ಬಿಟ್ಟುಕೊಟ್ಟು ತುಮಕೂರಿನತ್ತ ಮುಖ ಮಾಡಿದ್ದ ದೇವೇಗೌಡರಿಗೆ ಇಲ್ಲಿ ಭಾರೀ ಪೈಪೋಟಿ ಎದುರಾಯಿತು. ಹೇಮಾವತಿ ನೀರಿನ ವಿಚಾರವನ್ನ ಮುಂದಿಟ್ಟುಕೊಂಡು ದೇವೇಗೌಡರ ಕುಟುಂಬ ತುಮಕೂರಿನ ಜನತೆಗೆ ಭಾರೀ ಅನ್ಯಾಯ ಮಾಡಿದೆ ಅನ್ನೋದನ್ನ ಮತದಾರರಿಗೆ ತಲುಪಿಸುವಲ್ಲಿ ಎದುರಾಳಿ ಅಭ್ಯರ್ಥಿ ಸಫಲರಾಗಿದ್ದರು. ಮೈತ್ರಿ ಪಕ್ಷವಾಗಿದ್ದ ಕಾಂಗ್ರೆಸ್‌ನ ಹಲವು ಮುಖಂಡರೇ ದೇವೇಗೌಡರ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದ್ದರು. ಇನ್ನು ದೇವೇಗೌಡರ ಕುಟುಂಬ ಇಲ್ಲಿಗೆ ಬಂದರೆ ತಮಗೆ ಉಳಿಗಾಲವಿಲ್ಲ ಎಂದು ಅರಿತ ಕೆಲವು ಸ್ವಪಕ್ಷದ ನಾಯಕರೇ ಒಳಪೆಟ್ಟು ಕೊಟ್ಟರು. ಹೀಗಾಗಿ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಹಾಕಿದ ಶ್ರಮಕ್ಕೆ ಫಲ ಸಿಗಲಿಲ್ಲ. ಇನ್ನೊಂದೆಡೆ ಈ ಎಲ್ಲಾ ಕಾರಣಗಳು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಕೈ ಹಿಡಿದವು.
ಸೋಮಣ್ಣಗೆ ಬಿಜೆಪಿ ಟಿಕೆಟ್
ವಯಸ್ಸಿನ ಕಾರಣ ನೀಡಿ ಈ ಬಾರಿ ಹಾಲಿ ಸಂಸದ ಜಿ.ಎಸ್.ಬಸವರಾಜು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ (V Somanna) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಗೆ ಸೋಮಣ್ಣಗೆ ಬಿಜೆಪಿ ವರುಣಾ ಮತ್ತು ಚಾಮರಾಜನಗರದಲ್ಲಿ ಟಿಕೆಟ್ ನೀಡಿತ್ತು. ಮಾಜಿ ಸಚಿವ ಮಾಧುಸ್ವಾಮಿ, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಸಿದ್ದಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಸೇರಿದಂತೆ ಹಲವರು ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಪ್ರಬಲ ಪೈಪೋಟಿಯಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಮಣ್ಣ ಹೀನಾಯ ಸೋಲನುಭವಿಸಿದರು. ಅದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಆದರೆ ಹೈಕಮಾಂಡ್ ಸೋಮಣ್ಣಗೆ ಮಣೆ ಹಾಕಲಿಲ್ಲ. ತನ್ನ ರಾಜಕೀಯ ಭವಿಷ್ಯ ಕೊನೆಗೊಳ್ಳಬಹುದು ಎಂಬ ಆತಂಕದಲ್ಲಿದ್ದ ಸೋಮಣ್ಣ ಕಾಂಗ್ರೆಸ್ ಬಾಗಿಲಿನ ಸನಿಹದಲ್ಲಿದ್ದರು. ರಾಜ್ಯಸಭೆಗಾದರೂ ಪರಿಗಣಿಸುವಂತೆ ದೆಹಲಿಗೆ ತೆರಳಿ ಲಾಬಿ ನಡೆಸಿದ್ದರು. ಅದೂ ಕೈಗೂಡಲಿಲ್ಲ. ಕೊನೆಗೆ ಲೋಕಸಭಾ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನೇ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಬಿಜೆಪಿ ತಂತ್ರ ರೂಪಿಸಿದೆ. ಜೆಡಿಎಸ್ ಮೈತ್ರಿ ಬಲವೂ ಬಿಜೆಪಿಗೆ ವರದಾನವಾಗಬಹುದು. ಆದರೆ ಸೋಮಣ್ಣಗೆ ಟಿಕೆಟ್ ನೀಡಿರುವುದಕ್ಕೆ ಕ್ಷೇತ್ರದ ಒಳಗಡೆಯೇ ಅಸಮಾಧಾನ ಎದ್ದಿದೆ. ಇದು ಸೋಮಣ್ಣಗೆ ತಲೆನೋವಾಗಿ ಪರಿಣಮಿಸಿದೆ.
ಮುದ್ದಹನುಮೇಗೌಡ ‘ಕೈ’ ಅಭ್ಯರ್ಥಿ
ಕಳೆದ ವಿಧಾನಸಭೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ತೊರೆದು ಮಾಜಿ ಸಂಸದ ಮುದ್ದಹನುಮೇಗೌಡ (Mudda Hanumegowda) ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲೂ ಟಿಕೆಟ್ ಸಿಗುವ ಅನುಮಾನ ವ್ಯಕ್ತವಾಗುತ್ತದ್ದಂತೆ ಕಾಂಗ್ರೆಸ್‌ಗೆ. ಈಗ ಅವರಿಗೇ ಪಕ್ಷ ಮಣೆ ಹಾಕಿದೆ. ಟಿಕೆಟ್ ಸಿಗುತ್ತಿದ್ದಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯ ವಿಚಾರಕ್ಕೆ ಪಕ್ಷಾಂತರ ಮಾಡಿದ್ದ ಮುದ್ದಹನುಮೇಗೌಡ ಅವರು, 10 ವರ್ಷ ಶಾಸಕ, 10 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಒಂದು ಅವಧಿಗೆ ಸಂಸದನಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಬದುಕು ಕೊಟ್ಟ ಪಕ್ಷದಲ್ಲಿಯೇ ಮುಂದುವರಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು- 3,04,000
ಲಿಂಗಾಯತರು- 3,79,000
ಎಸ್‌ಸಿ/ಎಸ್‌ಟಿ- 3,57,000
ಗೊಲ್ಲರು- 1,01,385
ತಿಗಳರು- 28,000
ಕುರುಬರು- 1,19,000
ಮುಸ್ಲಿಂ- 1,78,000
ಇತರೆ- 1,50,836