ಬೆಂಗಳೂರು: ಮಹಾಭಾರತದ (Lok Sabha Election) ಕರ್ನಾಟಕ (Karnataka) ಕುರುಕ್ಷೇತ್ರದಲ್ಲಿ ಮೊದಲ ಹಂತದ ಮಹಾಯುದ್ಧ ಮುಗಿದಿದೆ. 2ನೇ ಹಂತದ ಸಮರಕ್ಕೆ ರಾಜಕೀಯ ನಾಯಕರು ಚಿತ್ತ ಹರಿಸಿದ್ದಾರೆ. 2ನೇ ಹಂತದ ಚುನಾವಣಾ ಪ್ರಚಾರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಎಂಟ್ರಿ ಕೊಡುತ್ತಿದ್ದಾರೆ. ಮೋದಿ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದು ಇವತ್ತು ಒಂದೇ ದಿನ 4 ಕ್ಷೇತ್ರಗಳಲ್ಲಿ ಮತ ಬೇಟೆಯಾಡಲಿದ್ದಾರೆ. 5 ಜಿಲ್ಲೆ 10 ಕ್ಷೇತ್ರಗಳು ಟಾರ್ಗೆಟ್ ಇಟ್ಟುಕೊಂಡು ಅಬ್ಬರಿಸಲಿದ್ದಾರೆ.
ರಾಜ್ಯದಲ್ಲಿ 28ಕ್ಕೂ 28 ಕ್ಷೇತ್ರ ಗೆಲ್ಲುವ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಕರ್ನಾಟಕದ (North Karnataka) ಬೆಳಗಾವಿ, ಉತ್ತರ ಕನ್ನಡ, ಬಳ್ಳಾರಿ, ದಾವಣಗೆರೆಗಳಲ್ಲಿ ಮತ ಬೇಟೆಯಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಶ್ರೀಗಂಧಕಾವಲ್‍ನಲ್ಲಿ ಭಾರೀ ಅಗ್ನಿ ಅವಘಡ
Advertisement
Advertisement
ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಪ್ರಥಮವಾಗಿ ಕುಂದಾನಗರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ಬೆಳಗಾವಿ ಮಹಾನಗರ ಮಾಲಿನಿ ಸಿಟಿ ಗ್ರೌಂಡ್‌ನಲ್ಲಿ ಮರಾಠಾ ಹಾಗೂ ಲಿಂಗಾಯತ ಮತಗಳ ಬೇಟೆಯಾಡಲಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ, ಮರಾಠಾ ಹಾಗೂ ಕುರುಬ ಸಮುದಾಯದ ಮತದಾರರನ್ನು ಸೆಳೆಯುವ ಯತ್ನ ಮಾಡಲಿದ್ದಾರೆ. ಅಲ್ಲದೇ ಬಿಜೆಪಿ ನಾಯಕರು ವಿವಿಧ 18 ಸಮಾಜದ ಮುಖಂಡರನ್ನು ಕರೆಯಿಸಿ ಪ್ರಧಾನಿಯವರನ್ನು ಭೇಟಿ ಮಾಡಿಸಲಿದ್ದಾರೆ.
Advertisement
ಕುಂದಾನಗರಿಯಲ್ಲಿ ಬೆಳಗಾವಿ, ಚಿಕ್ಕೋಡಿ ಅಭ್ಯರ್ಥಿ ಪರ ಮತಬೇಟೆ ಬಳಿಕ ಮಧ್ಯಾಹ್ನ 1 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ಹಾವೇರಿ, ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಬೆಣ್ಣೆ ನಗರಿಯಲ್ಲಿ ಮತ ಶಿಕಾರಿಯಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಲೋಕ ರಣಕಹಳೆ ಮೊಳಗಿಸಲಿದ್ದಾರೆ. ಇದನ್ನೂ ಓದಿ: ಜಮೀರ್ ರೋಷಾವೇಶದ ಭಾಷಣಕ್ಕೆ ಗ್ಲಾಸ್ ಪೀಸ್ ಪೀಸ್!
Advertisement
ಬೆಣ್ಣೆನಗರಿ ಬಳಿಕ ಗಣಿನಾಡಿನ ಧೂಳಿನಲ್ಲಿ ಅಬ್ಬರಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರೀ ಹೊಡೆತ ಬಿದ್ದ ಕಾರಣ ಲೋಕಸಭೆಯಲ್ಲಿ ಬಳ್ಳಾರಿ ಕೊಪ್ಪಳದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಮೋದಿ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ. ಬಳ್ಳಾರಿ-ಕೊಪ್ಪಳ ಕ್ಷೆತ್ರಗಳ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ. ಮೋದಿ ಎಂಟ್ರಿಯಿಂದ ನೆರೆಯ ರಾಯಚೂರು, ದಾವಣಗೆರೆ, ಹಾವೇರಿ ಕ್ಷೆತ್ರಗಳ ಮೇಲೂ ಪ್ರಭಾವ ಬೀರುವ ನಿರೀಕ್ಷೆ ಬಿಜೆಪಿ ನಾಯಕರಲ್ಲಿದೆ.
ಇಂದು ಸಂಜೆ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿ ನಾಳೆ ಬಾಗಲಕೋಟೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ. ಒಟ್ಟಿನಲ್ಲಿ ಉತ್ತರ ಕರ್ನಾಕದಲ್ಲಿ ಕೇಸರಿ ಬಾವುಟ ರಾರಾಜಿಸಲು ಸ್ವತಃ ಪ್ರಧಾನಿಯವರೇ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿದಿರುವುದು ಕಮಲ ಪಾಳಯದಲ್ಲಿ ಹೊಸ ಹುರುಪು ತಂದಿದೆ.
ಎಲ್ಲಿ ಎಷ್ಟು ಗಂಟೆಗೆ ಕಾರ್ಯಕ್ರಮ?
ಬೆಳಗ್ಗೆ 10 ಗಂಟೆ – ಬೆಳಗಾವಿ
ಮಧ್ಯಾಹ್ನ 1 ಗಂಟೆ – ಶಿರಸಿ, ಉತ್ತರ ಕನ್ನಡ
ಮಧ್ಯಾಹ್ನ 3 ಗಂಟೆ – ದಾವಣಗೆರೆ
ಸಂಜೆ 5 ಗಂಟೆ – ಬಳ್ಳಾರಿ