– ಈ ಬಾರಿ ಕರ್ತವ್ಯ ಪಥದಲ್ಲಿ ದೊಡ್ಡ ಸಮಾರಂಭ ನಡೆಯುವ ಸಾಧ್ಯತೆ
– ಈಗಾಗಲೇ ಅಧಿಕಾರಿಗಳ ಜೊತೆ ಒಂದು ಹಂತದ ಸಭೆ ಪೂರ್ಣ
ನವದೆಹಲಿ: ಹ್ಯಾಟ್ರಿಕ್ ಜಯದ ಕನಸಿನಲ್ಲಿರುವ ಎನ್‌ಡಿಎ (NDA) ಮೈತ್ರಿಕೂಟ ಜೂನ್ 9 ಭಾನುವಾರ ಪ್ರಮಾಣ ವಚನ (Oath Ceremony) ಸ್ವೀಕರಿಸುವ ಸಾಧ್ಯತೆಯಿದೆ. ಸಂಭಾವ್ಯ ಸಮಾರಂಭಕ್ಕೆ ತಾತ್ಕಾಲಿಕ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. 2014 ರಲ್ಲಿ ಎನ್‌ಡಿಎ ಸರ್ಕಾರವು ಮೇ 26 ಸೋಮವಾರ ಪ್ರಮಾಣ ವಚನ ಸ್ವೀಕರಿಸಿತ್ತು. ಆ ವರ್ಷದ ಫಲಿತಾಂಶವನ್ನು ಮೇ 16 ರಂದು ಪ್ರಕಟಿಸಲಾಗಿತ್ತು. 2019 ರಲ್ಲಿ ಎನ್‌ಡಿಎ ಸರ್ಕಾರವು ಮೇ 30 ಗುರುವಾರದಂದು ಪ್ರಮಾಣವಚನ ಸ್ವೀಕರಿಸಿತ್ತು. ಆ ವರ್ಷದ ಫಲಿತಾಂಶ ಮೇ 23 ರಂದು ಪ್ರಕಟವಾಗಿತ್ತು.
Advertisement
ಈ ಎರಡು ಪ್ರಮಾಣ ವಚನ ಕಾರ್ಯಕ್ರಮಗಳು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲು ಎನ್‌ಡಿಎ ಮುಂದಾಗಿದೆ. ಈ ಕಾರಣಕ್ಕೆ ಕರ್ತವ್ಯ ಪಥ್‌ನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
Advertisement
ಮೇ 27 ರಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಕಾರ್ಯಕಾರಿ ಸಭೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಜೂನ್ 10 ರಂದು ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲು ಸಾಧ್ಯವಾಗದಿರಬಹುದು ಎಂದು ಹೇಳಿದ ನಂತರ ನರೇಂದ್ರ ಮೋದಿಯವರ (Narendra Modi) ಪ್ರಮಾಣ ವಚನ ಸಮಾರಂಭದ ಬಗ್ಗೆ ಚರ್ಚೆ ಪ್ರಾರಂಭವಾಯಿತು.
Advertisement
ಮೇ 24 ರಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ವಿಭಾಗದಲ್ಲಿ ಪ್ರಮಾಣವಚನ ಸಮಾರಂಭದ ಬಗ್ಗೆ ಸಭೆ ನಡೆಸಲಾಗಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಸ್ಥಳದ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖ ಆಗದೇ ಇದ್ದರೂ 2019 ರಲ್ಲಿ ಆಗಮಿಸಿದ್ದ 8,000 ಕ್ಕಿಂತಲೂ ಹೆಚ್ಚಿನ ಜನರು ಕುಳಿತುಕೊಳ್ಳುವ ಸ್ಥಳವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ
Advertisement
ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲು 100 ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಜೂನ್ 4 ರ ನಂತರ ಸುಮಾರು 3-4 ದಿನಗಳಲ್ಲಿ ಸಮಾರಂಭಕ್ಕೆ ಪೂರ್ಣ ತಯಾರಿ ನಡೆಸುವಂತೆ ತಿಳಿಸಲಾಗಿದೆ.
ಜೂನ್ 13 ಮತ್ತು 14 ರಂದು ಇಟಲಿಯಲ್ಲಿ ನಡೆಯಲಿರುವ ಜಿ7 ಸಭೆಯಲ್ಲಿ ಭಾಗವಹಿಸಲು ಮೋದಿ ಅವರು ಈಗಾಗಲೇ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇಟಲಿಯಿಂದ ಬಂದ ಬಳಿಕ ಪೂರ್ಣ ಪ್ರಮಾಣದ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಯ ಆರು ಹಂತಗಳು ಪೂರ್ಣಗೊಂಡಿದ್ದು, 57 ಸ್ಥಾನಗಳನ್ನು ಒಳಗೊಂಡ ಏಳನೇ ಹಂತವು ಜೂನ್ 1 ರಂದು ನಡೆಯಲಿದೆ. ಈಗಾಗಲೇ ಚುನಾವಣಾಪೂರ್ವ ಸಮೀಕ್ಷೆಗಳು ಈ ಬಾರಿಯೂ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಏರಲಿವೆ ಎಂದು ಭವಿಷ್ಯ ನುಡಿದಿವೆ. ರಾಜಸ್ಥಾನ, ಹರ್ಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ಥಾನಗಳು ಕಡಿಮೆಯಾದರೆ ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ.