ಬಿಜೆಪಿಯ 2 ಕೋಟಿ ಹಣಕ್ಕೆ ಐಟಿ ಕ್ಲೀನ್‌ ಚಿಟ್‌ – ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್‌ ಎಂದ ಕಾಂಗ್ರೆಸ್‌

Public TV
1 Min Read
Lok Sabha Election 2024 Income Tax give clean chit to bjp 2 Crore Cash money Congress slams IT

ಬೆಂಗಳೂರು: ಬಿನ್ನಿಮಿಲ್ ಬಳಿ ಶನಿವಾರ ಸಂಜೆ 2 ಕೋಟಿ ರೂ. ಹಣ ಜಪ್ತಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಹಣ ತಮ್ಮದು ಎಂದು ಬಿಜೆಪಿ (BJP) ಹೇಳಿಕೊಂಡಿದ್ದು, ಇದಕ್ಕೆ ಪೂರಕವಾದ ಬ್ಯಾಂಕ್‌ ದಾಖಲೆಗಳನ್ನು ಒದಗಿಸಿದೆ.

ಇದು ಮಾರ್ಚ್ 27ರಂದು ಕೆನರಾ ಬ್ಯಾಂಕ್‌ನಲ್ಲಿ ಡ್ರಾ ಮಾಡಿದ್ದ ಹಣ. ಪಕ್ಷದ ಕಚೇರಿಯಲ್ಲಿ (Party Office) ಇರಿಸಲಾಗಿತ್ತು. ಇದನ್ನು ನಾಲ್ಕು ಲೋಕಸಭೆ ಕ್ಷೇತ್ರಗಳ (Lok Sabha Election) ಚುನಾವಣಾ ಕಾರ್ಯಕ್ಕೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಬಿಜೆಪಿ ವಿವರಣೆ ನೀಡಿದೆ. ಇದನ್ನು ಆದಾಯ ತೆರಿಗೆ (Income Tax) ಇಲಾಖೆ ಮೂಲಕ ಪರಿಶೀಲಿಸಿದ ಚುನಾವಣಾ ಆಯೋಗ (Election Commission) ಜಪ್ತಿ ಮಾಡಿದ್ದ ಹಣವನ್ನು ಬಿಜೆಪಿಗೆ ಮರಳಿಸಿದೆ.

ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಹಲವು ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಕೇಳಿದೆ. ಐಟಿ ಇಲಾಖೆಯ ಸೂಪರ್‌ಫಾಸ್ಟ್ ಕಾರ್ಯವೈಖರಿ. ಎರಡ್ಮೂರು ಗಂಟೆಯಲ್ಲೇ ನೀಡಿದ ಕ್ಲೀನ್‌ಚಿಟ್ ಉಲ್ಲೇಖಿಸಿ, ಇದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್‌ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಆಯೋಗಕ್ಕೆ ದೂರು ನೀಡಲು ಮುಂದಾಗಿದೆ. ಈ ಬೆಳವಣಿಗೆಗಳ ನಡುವೆ ಚುನಾವಣಾ ಆಯೋಗ, ಬಿಜೆಪಿ ಕಾರ್ಯದರ್ಶಿ ವಿರುದ್ಧ ದೂರು ನೀಡಿದೆ.

ಐಟಿ ಅಧಿಕಾರಿಗಳು ಸೂಪರ್ ಸ್ಪೀಡ್ ನಲ್ಲಿ ಕೆಲಸ ಮಾಡಿದ್ದಾರೆ. 6-7 ಗಂಟೆಯಲ್ಲಿ ಘಟನೆ ನಡೆಯುತ್ತೆ, ರಾತ್ರಿ 10 ಗಂಟೆಗೆ ಆ ಹಣ ಪರಿಶೀಲನೆ ಮಾಡಿದ್ದೇವೆ, ಆ ಹಣ ವಾಪಸ್ ಕೊಡಿ ಎಂದು ಐಟಿ ಆರ್ಡರ್ ಮಾಡುತ್ತೆ. 2 ಕೋಟಿ ನಗದು ವರ್ಗಾವಣೆ ಆಗ್ತಿದೆ, ಚುನಾವಣಾ ನೀತಿ ಸಂಹಿತೆ ಕೂಡ ಇದೆ. ಆದರೆ ಎರಡ್ಮೂರು ಗಂಟೆಯಲ್ಲೇ ಕ್ಲೀನ್ ಚಿಟ್ ಕೊಡುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಸರ್ಜಿಕಲ್ ಸ್ಟ್ರೈಕ್, ಇದನ್ನ ಪ್ರಜಾಪ್ರಭುತ್ವ ಅಂತಾ ಕರಿಬೇಕಾ? ಐಟಿ ನಡೆ, ಆರ್ಡರ್ ಬಗ್ಗೆ ತನಿಖೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

Share This Article