– ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನಿಗೆ ಕಾಂಗ್ರೆಸ್ ಟಿಕೆಟ್?
– ಸತತ ಎರಡನೇ ಬಾರಿ ಗೆಲ್ಲುತ್ತಾ ಬಿಜೆಪಿ?
ಜಾನಪದ ಕಲೆಗಳ ತವರೂರು ಚಾಮರಾಜನಗರ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಕುರಿತ ಐತಿಹ್ಯಗಳು ಜಾನಪದ ಕಲೆಯಲ್ಲಿ ಹಾಸು ಹೊಕ್ಕಾಗಿದೆ. ಗಡಿಜಿಲ್ಲೆ ಚಾಮರಾಜನಗರ ಲೋಕಸಭಾ ಚುನಾವಣಾ ವಿಚಾರದಲ್ಲೂ ತನ್ನದೇ ಆದ ಮಹತ್ವ ಹೊಂದಿದೆ.
ಚಾಮರಾಜನಗರ (Chamarajanagara) ಲೋಕಸಭಾ ಕ್ಷೇತ್ರ 90 ರ ದಶಕದವರೆಗೂ ಕಾಂಗ್ರೆಸ್‌ನ (Congress) ನೆಲೆಯಾಗಿತ್ತು. ನಂತರದ ಸಂದರ್ಭದಲ್ಲಿ ಇಲ್ಲಿ ಕಾಂಗ್ರೆಸ್ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿತು. ಈ ಅವಧಿಯಲ್ಲಿ ಜೆಡಿಎಸ್, ಜೆಡಿಯು ಇಲ್ಲಿ ನೆಲೆ ಕಂಡುಕೊಂಡವು. ಮೊಟ್ಟ ಮೊದಲ ಬಾರಿಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ (BJP) ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದೆ. ಈ ಬಾರಿಯ ಚುನಾವಣಾ ಕಣವೂ ರಂಗೇರಿದೆ.
Advertisement
Advertisement
Advertisement
ಕ್ಷೇತ್ರ ಪರಿಚಯ
1952 ರಲ್ಲಿ ಕ್ಷೇತ್ರ ರಚನೆಯಾಯಿತು. ಚಾಮರಾಜನಗರ 1952 ಹಾಗೂ 1957 ರಲ್ಲಿ ಮೈಸೂರು (Mysuru) ದ್ವಿಸದಸ್ಯ ಕ್ಷೇತ್ರವಾಗಿತ್ತು. 1962 ರಲ್ಲಿ ಚಾಮರಾಜನಗರ ಎಸ್ಸಿ (SC) ಮೀಸಲು ಕ್ಷೇತ್ರವಾಗಿ ಉದಯವಾಯಿತು. ಅಲ್ಲಿಂದ ಕಾಂಗ್ರೆಸ್ 10, ಜನತಾದಳ 2, ಜೆಡಿಎಸ್, ಜೆಡಿಯು, ಬಿಜೆಪಿ ತಲಾ ಒಂದು ಬಾರಿ ಗೆದ್ದಿವೆ. 2019ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದಲ್ಲಿ ಗೆದ್ದು ಸಂಸದರಾದರು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಹೊಂದಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಮೈಸೂರು ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ವರುಣಾ, ಹೆಚ್.ಡಿ.ಕೋಟೆ ಕ್ಷೇತ್ರಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಸಾಲಗಾರರ ಕಾಟ – ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಕ್ಷೇತ್ರದ ಮತದಾರರೆಷ್ಟು?
ಚಾಮರಾಜನಗರ ಕ್ಷೇತ್ರದಲ್ಲಿ 17,68,555 ಒಟ್ಟು ಮತದಾರರಿದ್ದಾರೆ. ಅವರ ಪೈಕಿ ಪುರುಷರು 8,74,183 ಹಾಗೂ ಮಹಿಳಾ ಮತದಾರರು 8,94,268 ಮತದಾರರಿದ್ದಾರೆ. ತೃತೀಯ ಲಿಂಗಿ ಮತದಾರರು 104 ಮಂದಿಯಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ (Srinivasa Prasad) ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ (JDS-Congress) ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಚುನಾವಣೆ ಎದುರಿಸಿದ್ದವು. ಹೀಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರು. ಕಾಂಗ್ರೆಸ್‌ನಿಂದ ಧ್ರುವನಾರಾಯಣ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕೇವಲ 1,817 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಇದೀಗ ವಾತಾವರಣ ಬದಲಾಗಿದ್ದು ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್, ಒಬ್ಬ ಜೆಡಿಎಸ್ ಶಾಸಕರಿದ್ದಾರೆ. ಬಿಜೆಪಿ ಒಂದು ಸ್ಥಾನ ಗೆಲ್ಲಲು ವಿಫಲವಾಗಿದೆ. ಅಲ್ಲದೇ ವಯಸ್ಸು ಹಾಗೂ ಅನಾರೋಗ್ಯದ ಹಿನ್ನೆಲೆ ಶ್ರೀನಿವಾಸ್ ಪ್ರಸಾದ್ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಬಿಜೆಪಿಯಿಂದ ಎಸ್.ಬಾಲರಾಜ್ ಕಣಕ್ಕೆ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಎಸ್.ಬಾಲರಾಜ್ (S Balaraj) ಅವರಿಗೆ ಮಣೆ ಹಾಕಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಈಚೆಗೆ ನಿಧನರಾದ ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಸುದ್ದಿ ಹರಿದಾಡಿತ್ತು. ಇದರ ಜೊತೆಗೆ ಪಕ್ಷದಲ್ಲಿ ಮಾಜಿ ಸಚಿವರಾದ ಎನ್.ಮಹೇಶ್, ಕೋಟೆ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಜು, ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಸಂಜಯ್, ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಪಕ್ಷದ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ಮಾಜಿ ಶಾಸಕ ಬಾಲರಾಜ್‌ಗೆ ಟಿಕೆಟ್ ನೀಡಿದೆ.ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಬಾಲರಾಜ್ ಕಣದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಘೋಷಣೆಯಾಗಿಲ್ಲ. ಸಚಿವ ಹೆಚ್.ಸಿ.ಮಹದೇವಪ್ಪ (Mahadevappa) ಸ್ಪರ್ಧೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಒತ್ತಾಯಿಸಿದ್ದರು. ಆದರೆ ಪುತ್ರನಿಗೆ ಚಾಮರಾಜನಗರ ಕ್ಷೇತ್ರದ ಟಿಕೆಟ್ ಕೊಡುವಂತೆ ಹೆಚ್.ಸಿ.ಮಹದೇವಪ್ಪ ಕೇಳುತ್ತಿದ್ದಾರೆ. ತಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕ್ಷೇತ್ರದ ಟಿಕೆಟ್ ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ (Sunil Bose) ಸಿಗಬಹುದು ಎಂದು ಹೇಳಲಾಗುತ್ತಿದೆ. ‘ಕೈ’ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮುಖಂಡ ಡಿ.ಎನ್.ನಟರಾಜು, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಕೂಡ ಇದ್ದಾರೆ.
ಕಾಂಗ್ರೆಸ್‌ಗೆ ಪ್ಲಸ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿಯಬಹುದು, ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ.
ಕಾಂಗ್ರೆಸ್ ಮೈನಸ್: ಸಂಘಟನಾ ಚತುರ, ಮಾಜಿ ಸಂಸದ ಧ್ರುವನಾರಾಯಣ (Dhruvanarayana) ಹಠಾತ್ ನಿಧನ, ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಕೊರತೆಯಿಂದ ಚುನಾವಣೆ ಮೇಲೆ ಪರಿಣಾಮ ಬೀರಬಹುದು, ವರುಣಾ ಕ್ಷೇತ್ರ ಹೊರತುಪಡಿಸಿ ಉಳಿದ 7 ವಿಧಾನಸಭಾ ಕ್ಷೇತ್ರಗಳು ಅಭಿವೃದ್ಧಿ ಕಾಣದಿರುವುದು, ಎಸ್‌ಸಿ/ಎಸ್‌ಟಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆಯಿಂದ ಆ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಬಹುದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು. ಇದನ್ನೂ ಓದಿ: ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್ ಅಖ್ತರ್
ಬಿಜೆಪಿ ಪ್ಲಸ್: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಿಂಗಾಯತ ಹಾಗೂ ಒಕ್ಕಲಿಗ ಮತಗಳ ಕ್ರೋಢೀಕರಣ, ಪ್ರಧಾನಿ ಮೋದಿ (PM Narendra Modi) ವರ್ಚಸ್ಸು (ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬರಲಿ ಎಂಬ ಜನರ ಮನಸ್ಥಿತಿ), ಮೀಸಲು ಕ್ಷೇತ್ರವಾಗಿದ್ದರಿಂದ ಲಿಂಗಾಯತ ಹಾಗೂ ಒಕ್ಕಲಿಗರ ಮತಗಳ ಜೊತೆಗೆ ದಲಿತ ಮತಗಳು ಬಿಜೆಪಿಗೆ ಬೀಳಬಹುದು.
ಬಿಜೆಪಿ ಮೈನಸ್: ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅನಾರೋಗ್ಯ ಹಿನ್ನೆಲೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡದೇ ಇರುವುದು, ಪಕ್ಷದಲ್ಲಿ ಸಂಘಟನೆಯ ಕೊರತೆ, ಇಡೀ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲದಿರುವುದು, ವರ್ಚಸ್ವಿ ಹಾಗೂ ಮುಂಚೂಣಿ ನಾಯಕರ ಕೊರತೆ.
ಜಾತಿವಾರು ಲೆಕ್ಕಾಚಾರ
ಪರಿಶಿಷ್ಟ ಜಾತಿ- 4.5 ಲಕ್ಷ
ಲಿಂಗಾಯತ- 3.5 ಲಕ್ಷ
ನಾಯಕ- 2.5 ಲಕ್ಷ
ಉಪ್ಪಾರ- 2 ಲಕ್ಷ
ಕುರುಬ- 1.20 ಲಕ್ಷ
ಒಕ್ಕಲಿಗ- 1.50 ಲಕ್ಷ
ಮುಸ್ಲಿಂ- 80 ಸಾವಿರ
ಇತರೆ- 2 ಲಕ್ಷ