ಚಿಕ್ಕಬಳ್ಳಾಪುರ: ಕಾಂಗ್ರೆಸ್‍ಗೆ ಮತ ನೀಡಿ ಎಚ್.ಡಿ.ಕುಮಾರಸ್ವಾಮಿ ಅವರ ಸಿಎಂ ಸ್ಥಾನವನ್ನು ಭದ್ರಗೊಳಿಸಿ ಎಂದು ದೋಸ್ತಿ ಸರ್ಕಾರದ ಅಭ್ಯರ್ಥಿ, ಸಂಸದ ವೀರಪ್ಪ ಮೊಯ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಾಗೇಪಲ್ಲಿ ತಾಲೂಕು ತಿಮ್ಮಂಪಲ್ಲಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹದ್ದಿನ ಕಣ್ಣು ಮುಖ್ಯಮಂತ್ರಿ ಸ್ಥಾನದ ಮೇಲಿದೆ. ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಸಿಎಂ ಆಗುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ಉಳಿಸಲು ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಕನಸನ್ನು ಸುಳ್ಳು ಮಾಡಲು ಕಾಂಗ್ರೆಸ್‍ಗೆ ಮತ ಹಾಕಿ. ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರಿಗೆ ಮತ ಹಾಕಬೇಡಿ. ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಈ ಭಾಗದ ಸಚಿವ ಶಿವಶಂಕರ್ ರೆಡ್ಡಿ ಹಾಗೂ ಕುಮಾರಸ್ವಾಮಿ ಅವರ ಸ್ಥಾನವನ್ನು ಭದ್ರಗೊಳಿಸಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು.