ಬೆಂಗಳೂರು: ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಭಿನ್ನಮತ ಶಮನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆ ವಿಫಲವಾಗಿದೆ.
ನಗರದ ಕಾವೇರಿ ನಿವಾಸದಲ್ಲಿ ಇಂದು ಮಂಡ್ಯ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಭೆ ನಡೆಸಿದರು. ಭೋಜನದೊಂದಿಗೆ ಮಂಡ್ಯ ರಾಜಕಾರಣದ ಬಗ್ಗೆ ಚರ್ಚೆ ಆರಂಭಿಸಲಾಗಿತ್ತು. ಈ ಸಭೆಯಲ್ಲಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಕೂಡ ಭಾಗಿಯಾಗಿದ್ದರು. ಇದನ್ನು ಓದಿ: ರಾಜ್ಯದಲ್ಲಿ ಮೈತ್ರಿ ಧರ್ಮ, ಆದ್ರೆ ಮಂಡ್ಯ ಬಿಟ್ಟು ಬಿಡಿ: ಚಲುವರಾಯಸ್ವಾಮಿ
Advertisement
Advertisement
ಸಿಎಂ ಪುತ್ರ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ಮಾಡಲು ಮಾಜಿ ಶಾಸಕ ಚಲುವರಾಯಸ್ವಾಮಿ, ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಮೂರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
Advertisement
ಬೇಡಿಕೆಗಳು ಏನು?:
ನಮ್ಮ ಅನುಕೂಲಕ್ಕೆ ತಕ್ಕಂತೆ ರಾಜಿ ಮಾಡಿಕೊಂಡ್ರೆ ಕಾರ್ಯಕರ್ತರು ಜೊತೆಯಲ್ಲಿ ನಿಲ್ಲಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣ ವಾಪಾಸ್ ತೆಗೆಯಲು ವ್ಯವಸ್ಥೆ ಮಾಡಿ. ಜೆಡಿಎಸ್ ನಾಯಕರು ಭರವಸೆ ಕೊಡಲಿ ಆಮೇಲೆ ನೋಡೋಣ ಎಂದು ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಬೇಡಿಕೆಗಳನ್ನು ಆಲಿಸಿದ ಸಿದ್ದರಾಮಯ್ಯ, ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಜೊತೆಗೆ ಮಾತನಾಡುತ್ತೇನೆ. ಹೀಗಾಗಿ ನಾಳೆ ರಾತ್ರಿ ಪುನಃ ಸಭೆ ನಡೆಯಲಿದ್ದು, ಎಲ್ಲರೂ ಭಾಗಿಯಾಗಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.