– ನೋಟಾ ಆಂದೋಲನಕ್ಕೆ ಅಲ್ಪಸಂಖ್ಯಾತರ ನಿರ್ಧಾರ!
ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಅಲ್ಪಸಂಖ್ಯಾತ ವೋಟ್ ಬೀಳುವುದಿಲ್ಲ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.
ಹೌದು. ಬೀದರ್ ಲೋಕಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕೆಂದು ಜಿಲ್ಲೆಯ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದರು. ಆದರೆ ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬೀದರ್ ಜಿಲ್ಲೆಯ 3 ಲಕ್ಷಕ್ಕೂ ಅಧಿಕ ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕದಿರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಅಲ್ಪಸಂಖ್ಯಾತ ಕೋಟಾದಲ್ಲಿ ಮನ್ನಾನ್ ಸೇಠ್, ಅಯಾಜ್ ಖಾನ್, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ನಾಯಕರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅವರನ್ನು ಕಡೆಗಣಿಸಿ ಈಶ್ವರ್ ಖಂಡ್ರೆ ಅವರ ಹೆಸರನ್ನು ಈಗಾಗಲೇ ಫೈನಲ್ ಮಾಡಲಾಗಿದೆ. ಇದರಿಂದಾಗಿ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷಕ್ಕೂ ಮತ ಹಾಕದಿರಲು ತೀರ್ಮಾನಿಸಿದ್ದು, ನೋಟಾ ಅಭಿಯಾನ ಆರಂಭಿಸಿದ್ದಾರೆ.
Advertisement
ಬೀದರ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿವಂತೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಸಚಿವರಾದ ಬಂಡೆಪ್ಪ ಖಾಶೆಂಪೂರ್, ಜಮ್ಮಿರ್ ಅಹಮ್ಮದ್ ಸೇರಿದಂತೆ ಅನೇಕರಿಗೆ ಮನವಿ ಸಲ್ಲಿಸಿದ್ದೇವು. ಆದರೆ ಯಾವುದೇ ನಾಯಕರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಮುಸ್ಲಿಂ ಮುಖಂಡರು ಮಿರ್ಜಾ ಶೆಫಿ ಬೇಸರ ವ್ಯಕ್ತಪಡಿಸಿದರು.
Advertisement
ಬೀದರ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಿಎಂ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಬಂದರೂ ನಾವು ಬೆಂಬಲ ನೀಡುವುದಿಲ್ಲ. ಪ್ರಚಾರವನ್ನು ನಿಲ್ಲಿಸುತ್ತೇವೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ, ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಮಿರ್ಜಾ ಶೆಫಿ ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್‍ಗೆ ನಮ್ಮ ವೋಟ್ ಬೇಕು. ಆದರೆ ನಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಲ್ಲ. ಇದು ಯಾವ ಪ್ರಜಾಪ್ರಭುತ್ವ? ಹೆಚ್ಚು ಅಲ್ಪಸಂಖ್ಯಾತರು ಇರುವುದು ಬೀದರ್ ನಲ್ಲಿ. ಆದರೆ ಕಾಂಗ್ರೆಸ್ ಇದನ್ನು ಪರಿಗಣಿಸಲಿಲ್ಲ ಎಂದು ನಗರಸಭೆ ಸದಸ್ಯ ಅಬ್ದುಲ್ ಅಜೀಜ್ ಕಿಡಿಕಾರಿದ್ದಾರೆ.